ಬೆಂಗಳೂರು: ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಉನ್ನತ ಪದವಿ ಕೋರ್ಸಿಗೆ ಪ್ರವೇಶ ಪಡೆಯಬೇಕು ಎಂದರೆ ಮನೆಯ ಆರ್ಥಿಕ ಸ್ಥಿತಿ ಸರಿಯಾಗಿರುವುದಿಲ್ಲ. ಹಣ ಇದ್ದರೂ ತಂದೆ-ತಾಯಿ ಬಳಿ ಕೇಳಲು ಮನಸ್ಸಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳ ಮೂಲಕ ವೈಯಕ್ತಿಕ ಸಾಲ ತೆಗೆದುಕೊಳ್ಳಬೇಕಾ? ಶೈಕ್ಷಣಿಕ ಸಾಲವೇ ಒಳ್ಳೆಯದಾ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ, ಇವುಗಳಲ್ಲಿ ಯಾವುದು ಬೆಟರ್? ಇಲ್ಲಿದೆ ಮಾಹಿತಿ.
ಶಿಕ್ಷಣ ಸಾಲದ ಕುರಿತು ಮಾಹಿತಿ
• ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ, ಶಿಕ್ಷಣ ಸಾಲದ ಬಡ್ಡಿ ಕಡಿಮೆ ಇರುತ್ತದೆ.
• ಸಾಲ ತೀರಿಸಲು ನಿಮಗೆ 15 ವರ್ಷಗಳವರೆಗೆ ಸಮಯ ಸಿಗುತ್ತದೆ. ಇದರಿಂದ EMI ಕಡಿಮೆಯಾಗಿ, ನಿಧಾನವಾಗಿ ಸಾಲ ತೀರಿಸಬಹುದು.
• ನಿಮ್ಮ ಕೋರ್ಸ್ ಮುಗಿದು, ಕೆಲಸ ಸಿಕ್ಕ ಒಂದು ವರ್ಷದ ನಂತರ ನೀವು EMI ಕಟ್ಟಲು ಪ್ರಾರಂಭಿಸಬಹುದು. ಅಲ್ಲಿಯವರೆಗೆ ಬ್ಯಾಂಕ್ ನಿಮ್ಮನ್ನು ಕೇಳುವುದಿಲ್ಲ.
• ನೀವು ಶಿಕ್ಷಣ ಸಾಲಕ್ಕೆ ಕಟ್ಟುವ ಬಡ್ಡಿಯ ಮೇಲೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80E ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ.
ವೈಯಕ್ತಿಕ ಸಾಲದ ಲಕ್ಷಣಗಳು
• ವೈಯಕ್ತಿಕ ಸಾಲಕ್ಕೆ ಹೆಚ್ಚು ದಾಖಲೆಗಳ ಅಗತ್ಯವಿರುವುದಿಲ್ಲ. ಹಾಗೆಯೇ, ಸಾಲ ನೀಡುವ ಪ್ರಕ್ರಿಯೆ ವೇಗವಾಗಿರುತ್ತದೆ. ತುರ್ತಾಗಿ ಹಣ ಬೇಕಾದಾಗ ಇದು ನೆರವಿಗೆ ಬರುತ್ತದೆ.
• ಶಿಕ್ಷಣ ಸಾಲಕ್ಕೆ ಹೋಲಿಸಿದರೆ ಇದರ ಬಡ್ಡಿ ದರ ಹೆಚ್ಚು. ಇದು ದೀರ್ಘಾವಧಿಯಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತದೆ.
• ಶೈಕ್ಷಣಿಕ ಸಾಲಕ್ಕೆ ಗ್ರೇಸ್ ಪಿರಿಯಡ್ ಇರುವುದಿಲ್ಲ. ಸಾಲ ತೆಗೆದುಕೊಂಡ ಮರು ತಿಂಗಳಿನಿಂದಲೇ ನೀವು EMI ಕಟ್ಟಲು ಪ್ರಾರಂಭಿಸಬೇಕು. ವಿದ್ಯಾರ್ಥಿಗಳಿಗೆ ಇದು ದೊಡ್ಡ ಹೊರೆಯಾಗುತ್ತದೆ.
ಯಾವುದು ಬೆಸ್ಟ್?
ಶಿಕ್ಷಣ ಸಾಲ ಹಾಗೂ ವೈಯಕ್ತಿಕ ಸಾಲಗಳ ಲಕ್ಷಣಗಳನ್ನು ಗಮನಿಸಿದಾಗ, ಶಿಕ್ಷಣ ಸಾಲವೇ ಉತ್ತಮ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ, ಉದ್ಯೋಗ ಹಿಡಿಯುವವರೆಗೆ ಇಎಂಐ ಹೊರೆ ಇರದ ಕಾರಣ ಶಿಕ್ಷಣ ಸಾಲ ಪಡೆಯುವುದೇ ಉತ್ತಮ. ಆದರೆ, ವಿದ್ಯಾರ್ಥಿಗಳು ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ಇದೆ? ಪ್ರೊಸಸಿಂಗ್ ಫೀಸ್ ಎಲ್ಲಿ ಕಡಿಮೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಲ ಪಡೆಯುವುದು ಒಳಿತು.