ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ದೊಡ್ಡ ಸದ್ದು ಮಾಡುತ್ತಿದೆ. ಹೇಗಾದರೂ ಮಾಡಿ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದರೆ, ನಾನು ಏನೂ ಮಾಡಿಲ್ಲ. ಈ ಯುದ್ಧದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಸಿಎಂ ಹೇಳುತ್ತಿದ್ದಾರೆ. ಈ ಮಧ್ಯೆ ಇಡಿ ಎಂಟ್ರಿಕೊಟ್ಟಿದ್ದು, ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಮುಡಾ ಕಚೇರಿಯ ಇಂಚಿಂಚೂ ದಾಖಲೆಯನ್ನು ಇಡಿ ಅಧಿಕಾರಿಗಳು ದಾಳಿ ವೇಳೆ ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. 20 ಅಧಿಕಾರಿಗಳ ತಂಡ, ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಜಡಿದು, ದಾಖಲೆ ಪರಿಶೀಲನೆ ಮಾಡಿದೆ. ಮುಡಾದಲ್ಲಿ 1ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಹಿಂದಿನ ಮುಡಾ ಆಯುಕ್ತ ಡಾ. ಕೆವಿ ರಾಜೇಂದ್ರ ಹಿಂದಿನ ಡಿಸಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. 2023 ರಲ್ಲಿನ ಅದೇ ಪತ್ರ ಮುಂದಿಟ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.
ಮೈಸೂರು ಮುಡಾ ಕಚೇರಿಯಲ್ಲಿ ರೇಡ್ ನಡೀತಿದ್ದಾಗಲೇ ಅತ್ತ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಕೇವಲ ಮುಡಾ ಅಧಿಕಾರಿಗಳಿಗೆ ಮಾತ್ರವಲ್ಲದೇ ಮುಡಾ ಹಗರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ದೇವರಾಜ್ಗೂ ಇಡಿ ಶಾಕ್ ಕೊಟ್ಟಿದೆ.
ಮುಡಾ ಅಕ್ರಮ, 14 ಸೈಟ್, ಅಧಿಸೂಚನೆ, ಡಿನೋಟಿಫಿಕೇಷನ್, ಭೂಸ್ವಾಧೀನ, ಪರಿಹಾರ, ಹಂಚಿಕೆ ಪತ್ರ, ಸಿಎಂ ಪತ್ನಿ ಪಡೆದಿದ್ದಾರೆ ಎನ್ನಲಾದ 14 ಸೈಟ್ಗಳು ಸೇರಿದಂತೆ ಇಡಿ ಮುಡಾದಲ್ಲಿ ನಡೆದಿರುವ ಹಗರಣದ ಬಗ್ಗೆ ಇಡಿ ಪ್ರಶ್ನೆ ಕೇಳಿದೆ ಎನ್ನಲಾಗಿದೆ.