ಬಿಬಿಎಂಪಿ ಇಂಜಿನಿಯರ್ ಗಳ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಎನ್. ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಭ್ರಷ್ಟಾಚಾರ ವಿರುದ್ಧದ ನನ್ನ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು. 2019ರಲ್ಲಿ ಈ ಕುರಿತು ಸಂಪೂರ್ಣ ದಾಖಲೆ ನೀಡಿ ACBಗೆ ದೂರು ಕೊಟ್ಟಿದ್ದೆ. ಎಸಿಬಿ ನಿರ್ಮಾಣದ ನಂತರ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆ ಆಗಿತ್ತು. ಆನಂತರ ಲೋಕಾದಿಂದ ಇಡಿಗೆ ವರ್ಗಾವಣೆಯಾಗಿ ಇಡಿ ಅಧಿಕಾರಿಗಳು ನನಗೆ ನೋಟೀಸ್ ನೀಡಿದ್ದರು.
2023ರಲ್ಲಿ ಇಡಿ ನೋಟಿಸ್ ಪಡೆದು ಸುಮಾರು 40 ಪುಟಗಳ ಹೇಳಿಕೆ ದಾಖಲಿಸಿದ್ದೆ. ದಾಖಲೆಯಲ್ಲಿ 900 ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣ ನಡೆದಿರುವ ಕುರಿತು ವಿಡಿಯೋ, ಕಡತಗಳ ಪ್ರತಿ ಸೇರಿದಂತೆ ಹಲವು ದಾಖಲೆಗಳನ್ನು ನೀಡಿದ್ದೆ. ಅದರಂತೆ ಈಗ ಇಡಿ ಅಧಿಕಾರಿಗಳು ಪಾಲಿಕೆ ಇಂಜಿನಿಯರ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಇಡಿ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಹೆಸರಿನಲ್ಲಿ 400 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಲಾಗಿದೆ ಸೇರಿದಂತೆ ಹಲವು ಆರೋಪಗಳನ್ನು ಎನ್. ರಮೇಶ್ ಮಾಡಿದ್ದರು. ಈ ಕುರಿತು ಹಲವು ದಾಖಲೆಗಳನ್ನು ಇಡಿಗೆ ನೀಡಿದ್ದರು.