ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಬಿ.ನಾಗೇಂದ್ರ ಅವರ ಸುಮಾರು 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.
ನಾಲ್ಕು ವಸತಿ ಮತ್ತು ವಾಣಿಜ್ಯ ಆಸ್ತಿ, ಒಂದು ಕಟ್ಟಡ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ಸೇರಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್ಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಆಸ್ತಿಗಳನ್ನು PMLA ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಇಡಿ ಕರೆದಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಇಡಿ ತಿಳಿಸಿದೆ. ಜಾರಿ ನಿರ್ದೇಶನಾಲಯದ ಪ್ರಕಾರ, ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮೌಲ್ಯ 8.07 ಕೋಟಿ ರೂ. ಆಗಿದೆ.
ಪ್ರಕರಣದ ಹಿನ್ನೆಲೆ :
ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 187 ಕೋಟಿ ರೂಪಾಯಿ ಹಣವನ್ನು ಅನಧಿಕೃತವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಪೈಕಿ ಸುಮಾರು 88 ಕೋಟಿ ರೂಪಾಯಿಗಳನ್ನು ನಕಲಿ ಖಾತೆಗಳ ಮೂಲಕ ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಶೆಲ್ ಕಂಪನಿಗಳಿಗೆ ವರ್ಗಾಯಿಸಿ, ನಂತರ ಅದನ್ನು ಚುನಾವಣಾ ಉದ್ದೇಶಕ್ಕೆ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ವಾಲ್ಮೀಕಿ ನಿಗಮದಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಈ ಹಗರಣವು ಬೆಳಕಿಗೆ ಬಂದಿತ್ತು. ಅವರು ಬರೆದಿದ್ದ ಡೆತ್ ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದಂತೆ ಹಣ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದು ರಾಜ್ಯಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿ, ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತದನಂತರ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇಡಿಯಿಂದ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯದ ಎಸ್‌ಐಟಿ ಕೂಡ ತನಿಖೆ ನಡೆಸುತ್ತಿವೆ. ಈ ನಡುವೆ ಇಡಿ ಆಸ್ತಿ ಜಪ್ತಿ ಮಾಡಿರುವುದು ನಾಗೇಂದ್ರ ಅವರಿಗೆ ಮತ್ತಷ್ಟು ಕಾನೂನು ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ : ಶಬರಿಮಲೆ ಚಿನ್ನ ಕಳ್ಳತನ ಕೇಸ್ | ಬಳ್ಳಾರಿಯ ಆಭರಣ ವ್ಯಾಪಾರಿ ಸೇರಿ ಇಬ್ಬರ ಬಂಧನ



















