ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಭಾರತದ ಆರ್ಥಿಕತೆಯು ಸದೃಢವಾದ ಹಾದಿಯಲ್ಲಿದೆ ಎಂದು ಘೋಷಿಸಿದ್ದಾರೆ. ಈ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಭಾರತದ ಒಟ್ಟು ಆಂತರಿಕ ಉತ್ಪನ್ನವು (GDP) ಶೇ.7.4ರಷ್ಟು ಬೆಳೆಯುವ ನಿರೀಕ್ಷೆಯಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಸಿದ್ಧಪಡಿಸಿರುವ ಈ ವರದಿಯು, ಭಾರತದ ಆರ್ಥಿಕ ಮೂಲಭೂತ ಅಂಶಗಳು ಅತ್ಯಂತ ಪ್ರಬಲವಾಗಿವೆ ಎಂದು ತಿಳಿಸಿದೆ. ಈ ಸಾಲಿನ ಶೇ.7.4 ಬೆಳವಣಿಗೆಯ ಅಂದಾಜು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್- ಶೇ.7.3) ಮತ್ತು ವಿಶ್ವ ಬ್ಯಾಂಕ್ (ಶೇ.7.2) ನೀಡಿರುವ ಮುನ್ಸೂಚನೆಗಳಿಗಿಂತ ಸ್ವಲ್ಪ ಆಶಾದಾಯಕವಾಗಿದೆ. ಇನ್ನು ಮುಂಬರುವ 2026-27ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇ.6.8 ರಿಂದ ಶೇ. 7.2ರ ವ್ಯಾಪ್ತಿಯಲ್ಲಿ ಇರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಹಣದುಬ್ಬರ ನಿಯಂತ್ರಣದಲ್ಲಿ
ದೇಶದ ಜನಸಾಮಾನ್ಯರಿಗೆ ಸಮಾಧಾನಕರ ಸಂಗತಿಯೆಂದರೆ ಹಣದುಬ್ಬರವು ನಿಯಂತ್ರಣದಲ್ಲಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಶೇ.2ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜಿಸಿದೆ. ಇದು ಆರ್‌ಬಿಐ ನಿಗದಿಪಡಿಸಿರುವ ಶೇ.4ರ ಗುರಿಗಿಂತಲೂ ಕಡಿಮೆ ಇರುವುದು ಆರ್ಥಿಕತೆಯ ಆರೋಗ್ಯವನ್ನು ಸೂಚಿಸುತ್ತಿದೆ.
ಉದ್ಯೋಗ ಸೃಷ್ಟಿ ಮತ್ತು ಎಐ (AI) ಸವಾಲು
ಆರ್ಥಿಕ ಸಮೀಕ್ಷೆಯು ದೇಶದ ಖಾಸಗಿ ವಲಯಕ್ಕೆ ಒಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವು ಸಾಂಪ್ರದಾಯಿಕ ಉದ್ಯೋಗ ಮಾರುಕಟ್ಟೆಯಲ್ಲಿ ಬದಲಾವಣೆ ತರುತ್ತಿರುವ ಈ ಸಮಯದಲ್ಲಿ, ಖಾಸಗಿ ಕಂಪನಿಗಳು ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ವರದಿ ಒತ್ತಿಹೇಳಿದೆ. ಹೂಡಿಕೆಯ ನಿರೀಕ್ಷೆಗಳು ಕೇವಲ ಊಹಾಪೋಹಗಳಾಗದೆ, ವಾಸ್ತವದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾಗಿರಬೇಕು ಎಂದು ಸಮೀಕ್ಷೆ ಆಶಿಸಿದೆ.
ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ
ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯು ಮುಂದುವರಿದಿದೆ. ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2021-22ರಲ್ಲಿ 5.93 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೆ, ಅದು 2025-26ರಲ್ಲಿ 11.21 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಂದರೆ ಇದು ಜಿಡಿಪಿಯ ಶೇ. 3.1 ರಷ್ಟಿದೆ. 2047ರ ವೇಳೆಗೆ ‘ವಿಕಸಿತ ಭಾರತ’ದ ಗುರಿ ತಲುಪಲು ಸಾರ್ವಜನಿಕ ವೆಚ್ಚದ ಜೊತೆಗೆ ಖಾಸಗಿ ಸಹಭಾಗಿತ್ವವೂ ಅತ್ಯಗತ್ಯ ಎಂದು ವರದಿ ಪ್ರತಿಪಾದಿಸಿದೆ.
ಇದನ್ನೂ ಓದಿ: ದುರಂತಕ್ಕೀಡಾದ ವಿಮಾನದ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಕೊನೆಯ ಸಂಭಾಷಣೆ ಏನು ಗೊತ್ತಾ?


















