ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದರೂ, ನನ್ನ ಮಗನಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡದೆ ಮೂರು ವರ್ಷಗಳಿಂದ ಕಾಯಿಸುತ್ತಿದ್ದೀರಿ ಎಂದು ಭಾರತೀಯ ಕ್ರಿಕೆಟಿಗ ಅಭಿಮನ್ಯು ಈಶ್ವರನ್ ಅವರ ತಂದೆ ರಂಗನಾಥನ್ ಈಶ್ವರನ್ ಅವರು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ವಿರುದ್ಧ ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿಯೂ ಅಭಿಮನ್ಯು ಈಶ್ವರನ್ ಅವರನ್ನು ಕಡೆಗಣಿಸಿ, ಕರುಣ್ ನಾಯರ್ ಅವರಿಗೆ ಅವಕಾಶ ನೀಡಿದ ನಂತರ ರಂಗನಾಥನ್ ಈಶ್ವರನ್ ಅವರು ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಮೊದಲ ಬಾರಿಗೆ ಆಯ್ಕೆಯಾದಾಗಿನಿಂದ, ಅಭಿಮನ್ಯು ಟೆಸ್ಟ್ ಪದಾರ್ಪಣೆಗಾಗಿ ಕಾಯುತ್ತಲೇ ಇದ್ದಾರೆ.
“ಐಪಿಎಲ್ ಪ್ರದರ್ಶನ ನೋಡಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬೇಡಿ”
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ರಂಗನಾಥನ್, “ನನ್ನ ಮಗ ಕಾಯುತ್ತಿರುವ ದಿನಗಳನ್ನಲ್ಲ, ವರ್ಷಗಳನ್ನು ನಾನು ಎಣಿಸುತ್ತಿದ್ದೇನೆ. ಈಗಾಗಲೇ ಮೂರು ವರ್ಷಗಳಾಯಿತು. ಒಬ್ಬ ಆಟಗಾರನ ಕೆಲಸ ರನ್ ಗಳಿಸುವುದು, ಅದನ್ನು ಅವನು ನಿರಂತರವಾಗಿ ಮಾಡುತ್ತಿದ್ದಾನೆ. ಕಳೆದುಹೋದ ಒಂದು ವರ್ಷದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅವನು ಸುಮಾರು 864 ರನ್ ಗಳಿಸಿದ್ದಾನೆ. ಆದರೆ ಅದೇ ಸಮಯದಲ್ಲಿ ಕರುಣ್ ನಾಯರ್ ದುಲೀಪ್ ಅಥವಾ ಇರಾನಿ ಟ್ರೋಫಿ ತಂಡಗಳಲ್ಲಿ ಇರಲಿಲ್ಲ. ಹಾಗಿದ್ದಾಗ ಇಬ್ಬರನ್ನೂ ಹೇಗೆ ಹೋಲಿಸುತ್ತೀರಿ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
“ಕೆಲವು ಆಟಗಾರರು ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಇದು ಸರಿಯಲ್ಲ. ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ರಣಜಿ, ದುಲೀಪ್ ಮತ್ತು ಇರಾನಿ ಟ್ರೋಫಿಯಂತಹ ದೇಶೀಯ ಪಂದ್ಯಗಳ ಪ್ರದರ್ಶನವನ್ನೇ ಮಾನದಂಡವಾಗಿ ಇಟ್ಟುಕೊಳ್ಳಬೇಕು,” ಎಂದು ಅವರು ಪರೋಕ್ಷವಾಗಿ ಸಾಯಿ ಸುದರ್ಶನ್ ಅವರ ಇತ್ತೀಚಿನ ಆಯ್ಕೆಯನ್ನು ಟೀಕಿಸಿದರು.
ಅಭಿಮನ್ಯು ಅಮೋಘ ದಾಖಲೆಗಳ ಹೊರತಾಗಿಯೂ ಕಾಯುವಿಕೆ
ಬಂಗಾಳದ ಬ್ಯಾಟರ್ ಆಗಿರುವ ಅಭಿಮನ್ಯು ಈಶ್ವರನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 103 ಪಂದ್ಯಗಳಿಂದ 48.70ರ ಸರಾಸರಿಯಲ್ಲಿ 27 ಶತಕಗಳ ಸಹಿತ 7841 ರನ್ ಗಳಿಸಿದ್ದಾರೆ. ಕಳೆದ ದೇಶೀಯ ಋತುವಿನಲ್ಲಿ ಅವರು 127*, 191, 116, 157*, 200* ನಂತಹ ಅಮೋಘ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನಗಳ ಹೊರತಾಗಿಯೂ, 2022ರಿಂದ ಇಲ್ಲಿಯವರೆಗೆ 15 ಹೊಸ ಆಟಗಾರರು ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅಭಿಮನ್ಯು ಅವರ ಕಾಯುವಿಕೆ ಮಾತ್ರ ಇನ್ನೂ ಮುಂದುವರಿದಿದೆ.



















