ನವದೆಹಲಿ: ಅಫ್ಘಾನಿಸ್ತಾನ-ತಜಕಿಸ್ತಾನ ಗಡಿ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮವೆಂಬಂತೆ ಜಮ್ಮು ಕಾಶ್ಮೀರ, ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಸಿದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಮಧ್ಯಾಹ್ನ 12:17ಕ್ಕೆ ಮೇಲ್ಮೈಯಿಂದ 86 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶದಲ್ಲಿದೆ. ಇದು ಟೆಕ್ಟೋನಿಕ್ ಚಲನೆಯಿಂದಾಗಿ ಹೆಚ್ಚಿನ ಭೂಕಂಪನ ಚಟುವಟಿಕೆಗೆ ಗುರಿಯಾಗುವಂಥ ಪ್ರದೇಶವಾಗಿದೆ.
ಕಾಶ್ಮೀರ ಕಣಿವೆ ಮತ್ತು ದೆಹಲಿ-ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಮತ್ತು ಮಧ್ಯಮ ಭೂಕಂಪನದ ಅನುಭವವಾಗಿದ್ದು, ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಶ್ಮೀರದ ಕೆಲವರು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿರುವ ವೀಡಿಯೋಗಳಲ್ಲಿ ಭೂಮಿ ಕಂಪಿಸಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಭೀತಿಗೊಳಗಾದ ಜನರು ಕಟ್ಟಡದಿಂದ ಹೊರಗೆ ಧಾವಿಸುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯಕ್ಕೆ ಗಡಿಯ ಎರಡೂ ಬದಿಗಳಿಂದ ಯಾವುದೇ ಸಾವುನೋವುಗಳು ಅಥವಾ ದೊಡ್ಡ ಹಾನಿಯ ಬಗ್ಗೆ ವರದಿಗಳಾಗಿಲ್ಲ.
ಎಲ್ಲೆಲ್ಲಿ ಕಂಪನದ ಅನುಭವ?
ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರವಿರುವ ಕಾಶ್ಮೀರ ಕಣಿವೆಯಲ್ಲಿ ಮಧ್ಯಮ ಭೂಕಂಪನದ ಅನುಭವವಾಗಿದೆ. ಯಾವುದೇ ಹಾನಿ ವರದಿಯಾಗಿಲ್ಲ, ಆದರೆ ಈ ಪ್ರದೇಶವು ಭೂಕಂಪನ ಸಕ್ರಿಯ ವಲಯಗಳಿಗೆ ಸಮೀಪವಿರುವ ಕಾರಣ ಸ್ಥಳೀಯರಲ್ಲಿ ಆತಂಕ ಮನೆಮಾಡಿತು.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್ ಮತ್ತು ಗಾಜಿಯಾಬಾದ್‌ನಲ್ಲಿ ಲಘು ಭೂಕಂಪನದ ಅನುಭವವಾಗಿದೆ. ನೆಲ ಕಂಪಿಸಿದ ಅನುಭವವಾಗಿ ಕೆಲವರು ಹೊರಗೆ ಧಾವಿಸಿದ್ದಾರೆ. ಇಸ್ಲಾಮಾಬಾದ್ ಸೇರಿದಂತೆ ವಾಯುವ್ಯ ಪಾಕಿಸ್ತಾನದಲ್ಲಿ ಇದೇ ರೀತಿಯ ಭೂಕಂಪನದ ಅನುಭವವಾಗಿದೆ.



















