ಅಪರೂಪದ ಖಗೋಳ ವಿದ್ಯಮಾನಕ್ಕೆ ಜಗತ್ತು ಸಜ್ಜಾಗಿದೆ. ಭಾನುವಾರ ರಾತ್ರಿ ರಕ್ತ ಚಂದ್ರ ಎಂದು ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ.
ಸಂಪೂರ್ಣ ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ನೇರವಾಗಿ ಬಂದಾಗ ಸಂಭವಿಸುವ ಒಂದು ಖಗೋಳ ವಿದ್ಯಮಾನವಾಗಿದೆ. ಈ ಸಂದರ್ಭದಲ್ಲಿ, ಭೂಮಿಯ ಅತ್ಯಂತ ಗಾಢವಾದ ನೆರಳು (ಅಂಬ್ರಾ) ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ, ಇದರಿಂದ ಚಂದ್ರನು ತಾಮ್ರದ ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಈ ಅಪರೂಪದ ವಿದ್ಯಮಾನವು ಸೆಪ್ಟೆಂಬರ್ 7, 2025 ರಂದು ಸಂಭವಿಸಲಿದ್ದು, ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ಭಾಗಗಳಲ್ಲಿ ಗೋಚರಿಸಲಿದೆ. ಈ ವಿದ್ಯಮಾನವನ್ನು “ರಕ್ತ ಚಂದ್ರ” (Blood Moon) ಎಂದೂ ಕರೆಯಲಾಗುತ್ತದೆ.
ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಸಂಪೂರ್ಣ ಚಂದ್ರಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಭೂಮಿಯು ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆಹಿಡಿದು, ತನ್ನ ನೆರಳನ್ನು ಚಂದ್ರನ ಮೇಲೆ ಬೀಳಿಸುತ್ತದೆ. ಸೂರ್ಯಗ್ರಹಣಗಳಿಗಿಂತ ಭಿನ್ನವಾಗಿ, ಚಂದ್ರಗ್ರಹಣವು ಭೂಮಿಯ ರಾತ್ರಿ ಭಾಗದಲ್ಲಿರುವ ಯಾರಿಗಾದರೂ ಗೋಚರಿಸುತ್ತದೆ. ಅಂದರೆ, ಕೋಟಿಗಟ್ಟಲೆ ಜನರು ಒಂದೇ ಸಮಯದಲ್ಲಿ ಈ ವಿದ್ಯಮಾನವನ್ನು ವೀಕ್ಷಿಸಬಹುದು.
ಚಂದ್ರ ಏಕೆ ಕೆಂಪಾಗುತ್ತದೆ?
ಗ್ರಹಣದ ಸಮಯದಲ್ಲಿ, ಚಂದ್ರನು ಸಂಪೂರ್ಣವಾಗಿ ಕತ್ತಲಾಗುವ ಬದಲು ಕೆಂಪಾಗಿ ಹೊಳೆಯುತ್ತಾನೆ. ಇದಕ್ಕೆ ಕಾರಣ ‘ರೇಲಿ ಸ್ಕ್ಯಾಟರಿಂಗ್’ (Rayleigh scattering) ಎಂಬ ವಿದ್ಯಮಾನ. ಇದೇ ವಿದ್ಯಮಾನದಿಂದಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ವರ್ಣಮಯವಾಗಿ ಕಾಣಿಸುತ್ತವೆ. ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ, ಕಡಿಮೆ ತರಂಗಾಂತರದ (ನೀಲಿ ಮತ್ತು ನೇರಳೆ) ಬಣ್ಣಗಳು ಚದುರಿಹೋಗುತ್ತವೆ.
ಆದರೆ, ಹೆಚ್ಚು ತರಂಗಾಂತರದ (ಕೆಂಪು ಮತ್ತು ಕಿತ್ತಳೆ) ಬಣ್ಣಗಳು ವಾತಾವರಣದ ಮೂಲಕ ಬಾಗಿ, ಚಂದ್ರನ ಮೇಲೆ ಬೀಳುತ್ತವೆ. ಹೀಗಾಗಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ಎಲ್ಲಾ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಒಂದೇ ಬಾರಿಗೆ ಪ್ರತಿಫಲಿಸುತ್ತಿರುತ್ತಾನೆ.
ಗ್ರಹಣದ ಅಪರೂಪತೆ ಮತ್ತು ವೀಕ್ಷಣೆ
ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುವುದಿಲ್ಲ. ಏಕೆಂದರೆ, ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಗೆ ಹೋಲಿಸಿದರೆ ಸುಮಾರು 5 ಡಿಗ್ರಿಗಳಷ್ಟು ಓರೆಯಾಗಿದೆ. ಹೀಗಾಗಿ, ಸಾಮಾನ್ಯವಾಗಿ ಚಂದ್ರನು ಭೂಮಿಯ ನೆರಳಿನ ಮೇಲೆ ಅಥವಾ ಕೆಳಗೆ ಹಾದುಹೋಗುತ್ತಾನೆ. ಸೂರ್ಯ, ಭೂಮಿ ಮತ್ತು ಚಂದ್ರ ಸಂಪೂರ್ಣವಾಗಿ ಒಂದೇ ರೇಖೆಯಲ್ಲಿ ಬಂದಾಗ ಮಾತ್ರ ಈ ಅದ್ಭುತ ವಿದ್ಯಮಾನ ಸಂಭವಿಸುತ್ತದೆ.
ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣವಾಗಿ ಇರುವಾಗ, ಅಂದರೆ ಪೂರ್ಣ ಗ್ರಹಣದ ಹಂತದಲ್ಲಿ, ಸುಮಾರು 107 ನಿಮಿಷಗಳ ಕಾಲ ಕೆಂಪಾಗಿ ಕಾಣಿಸಬಹುದು.
ಸೂರ್ಯಗ್ರಹಣದಂತೆ ಇದಕ್ಕೆ ಯಾವುದೇ ವಿಶೇಷ ಕನ್ನಡಕಗಳ ಅಗತ್ಯವಿಲ್ಲ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು ಎಂದು ತಜ್ಞರು ಹೇಳಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳ ನಂತರ ಇದು ಎರಡನೇ ಸಂಪೂರ್ಣ ಚಂದ್ರಗ್ರಹಣವಾಗಿದೆ.
ಎಲ್ಲೆಲ್ಲಿ ಗೋಚರ?
ಸೆಪ್ಟೆಂಬರ್ 7ರಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದ ವೀಕ್ಷಣೆಗೆ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಅತ್ಯುತ್ತಮ ಅವಕಾಶವಿರಲಿದೆ. ಇದರೊಂದಿಗೆ, ಆಫ್ರಿಕಾದ ಪೂರ್ವ ಭಾಗ ಮತ್ತು ಪಶ್ಚಿಮ ಆಸ್ಟ್ರೇಲಿಯಾದಲ್ಲೂ ಪೂರ್ಣ ಗ್ರಹಣ ಗೋಚರಿಸಲಿದೆ.
ಭಾರತದಲ್ಲಿ ಗ್ರಹಣದ ಸಮಯ
ಸಂಪೂರ್ಣ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಸೆಪ್ಟೆಂಬರ್ 7ರ ರಾತ್ರಿ 11:00 ಗಂಟೆಗೆ ಪ್ರಾರಂಭವಾಗಿ, ಸೆಪ್ಟೆಂಬರ್ 8ರ ಮುಂಜಾನೆ 12:22 ಗಂಟೆಗೆ ಕೊನೆಗೊಳ್ಳಲಿದೆ. ಇದಕ್ಕೂ ಮುನ್ನ, ಚಂದ್ರನು ಭೂಮಿಯ ಹೊರ ನೆರಳನ್ನು ಪ್ರವೇಶಿಸುವುದರಿಂದ, ಪೆನಂಬ್ರಲ್ ಹಂತವು ( ಭಾಗಶಃ ನೆರಳಿನ ಹಂತ) ಸುಮಾರು ರಾತ್ರಿ 10:01 ಗಂಟೆಗೆ ಆರಂಭವಾಗಲಿದೆ. ಯುರೋಪ್ ಮತ್ತು ಆಫ್ರಿಕಾದಲ್ಲಿ ಸಂಜೆಯ ಆರಂಭದಲ್ಲಿ ಚಂದ್ರೋದಯದ ಸಮಯದಲ್ಲಿ ಭಾಗಶಃ ಗ್ರಹಣ ಗೋಚರಿಸಿದರೆ, ಅಮೆರಿಕ ಖಂಡದ ಜನರಿಗೆ ಈ ಗ್ರಹಣ ಸಂಪೂರ್ಣವಾಗಿ ಕಾಣಿಸುವುದಿಲ್ಲ.
ಮುಂಬರುವ ಸೂರ್ಯಗ್ರಹಣ
ಈ ಚಂದ್ರಗ್ರಹಣವು ಮುಂದಿನ ವರ್ಷ ಅಂದರೆ, ಆಗಸ್ಟ್ 12, 2026 ರಂದು ಸಂಭವಿಸಲಿರುವ ಅಪರೂಪದ ಸಂಪೂರ್ಣ ಸೂರ್ಯಗ್ರಹಣಕ್ಕೆ ಮುನ್ನುಡಿಯಾಗಿದೆ. ಈ ಸೂರ್ಯಗ್ರಹಣವು ಯುರೋಪಿನ ಸ್ಪೇನ್ ಮತ್ತು ಐಸ್‌ಲ್ಯಾಂಡ್ ಸೇರಿದಂತೆ ಕಿರಿದಾದ ಪಟ್ಟಿಯಲ್ಲಿ ಗೋಚರಿಸಲಿದೆ.



















