ಭುವನೇಶ್ವರ: ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯದ(Jagannath Temple) ಬಳಿ ನಡೆದ ಅಚ್ಚರಿಕೆಯ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಊಹೆಗಳು, ಚರ್ಚೆಗಳು ಆರಂಭವಾಗಿದ್ದು, ಒಬ್ಬೊಬ್ಬರು ಒಂದೊಂದು ವಾದವನ್ನು ಮುಂದಿಡಲಾರಂಭಿಸಿದ್ದಾರೆ. ಅಂದ ಹಾಗೆ ಜಗನ್ನಾಥ ದೇಗುಲದಲ್ಲಿ ನಡೆದ ಆ ಆಶ್ಚರ್ಯಕರ ವಿದ್ಯಮಾನವೇನು?
ಪುರಿ ಜಗನ್ನಾಥ ದೇವಾಲಯದ ಪವಿತ್ರ ಧ್ವಜವನ್ನು ಹೋಲುವ ಬಟ್ಟೆಯ ತುಂಡೊಂದನ್ನು ಗಿಡುಗವೊಂದು ಹೊತ್ತೊಯ್ಯುತ್ತಿರುವ ಕುತೂಹಲಕಾರಿ ವಿಷಯವಿದಾಗಿದೆ. ಈ ದೃಶ್ಯವಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಕ್ತರು ಮತ್ತು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಹದ್ದು ಧ್ವಜದ ಬಟ್ಟೆಯನ್ನು ಹಿಡಿದುಕೊಂಡು ಶ್ರೀಮಂದಿರವನ್ನು ಸುತ್ತು ಹಾಕುತ್ತಿರುವುದನ್ನು ಕಾಣಬಹುದು. ಒಡಿಶಾ ಟಿವಿ ಪ್ರಕಾರ, ಕಳೆದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದೇ ಸಮಯದಲ್ಲಿ ಕರಾವಳಿ ನಗರದಲ್ಲಿ ನಾರ್ವೆಸ್ಟರ್‌ನಿಂದ ಪ್ರಚೋದಿಸಲ್ಪಟ್ಟ ಸಂಕ್ಷಿಪ್ತ ಬಿರುಗಾಳಿಯೂ ಬೀಸಿದೆ. ಗಿಡುಗವು ಆರಂಭದಲ್ಲಿ ದೇವಾಲಯದ ಪಶ್ಚಿಮ ದ್ವಾರದ ಕಡೆಗೆ ಹಾರುತ್ತಾ, ನಂತರ ಸಮುದ್ರದ ಕಡೆಗೆ ಹೋಗಿ ಕೊನೆಗೆ ಕಣ್ಮರೆಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗಿಡುಗ ಹೊತ್ತೊಯ್ದಿರುವ ಕೇಸರಿ ಬಣ್ಣದ ಬಟ್ಟೆಯು ದೇವಾಲಯದ ಧ್ವಜವನ್ನೇ ಹೋಲುತ್ತಿದ್ದರೂ, ಅದು ವಾಸ್ತವದಲ್ಲಿ ಜಗನ್ನಾಥ ದೇವಾಲಯಕ್ಕೆ ಸೇರಿದ ಧ್ವಜವೇ ಅಥವಾ ಸಾಮಾನ್ಯ ಬಟ್ಟೆಯ ತುಂಡೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಆದಾಗ್ಯೂ, ಈ ನಿಗೂಢ ಘಟನೆಯು ಆನ್ ಲೈನ್ ನಲ್ಲಿ ಚರ್ಚೆಯ ಅಬ್ಬರವನ್ನೇ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಒಬ್ಬೊಬ್ಬರು ಒಂದೊಂದು ಥಿಯರಿಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.
“ಗಿಡುಗವು ಜಗನ್ನಾಥ ದೇವಾಲಯದಿಂದ ಪವಿತ್ರ ಧ್ವಜವನ್ನು ತೆಗೆದುಕೊಂಡು ಹೋಗಿರುವುದು ಕಳ್ಳತನವಲ್ಲ – ಅದು ಸ್ವರ್ಗೀಯ ಸಂದೇಶವಾಗಿತ್ತು. ಭಗವಾನ್ ಜಗನ್ನಾಥನ ಆಶೀರ್ವಾದದಿಂದ ಗರುಡನೇ ಸ್ವತಃ ಸ್ವರ್ಗಕ್ಕೆ ಏರಿದಂತೆ, ದೈವಿಕ ಹಸ್ತಕ್ಷೇಪ, ನವೀಕರಣ ಮತ್ತು ಶಕ್ತಿಯುತ ಬದಲಾವಣೆಯ ಸಂಕೇತವಿದು. ಉತ್ತಮ ಯುಗದ ಆಗಮನದ ಸಂಕೇತವಿದು. ವಿಶ್ವಾಸವಿರಿಸಿ, ಪ್ರಾರ್ಥಿಸಿ. ಗರುಡವು ಧ್ವಜವನ್ನು ಕಾಯುತ್ತಿದೆ. ಭಗವಾನ್ ಜಗನ್ನಾಥನ ಶಕ್ತಿಯು ಜಾಗತಿಕವಾಗಿ ವಿಸ್ತರಿಸುತ್ತಿದೆ. ಜಗನ್ನಾಥನ ಹೆಸರು ಮತ್ತು ಸಂದೇಶವನ್ನು ವಿಶ್ವಾದ್ಯಂತ ಹರಡುವ ರೂಪಕವಾಗಿ ಆಗಸದಲ್ಲಿ ಧ್ವಜವು ಹಾರಿದೆ” ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, “ಖಂಡಿತವಾಗಿಯೂ ಏನೋ ಒಳ್ಳೆಯದು ಸಂಭವಿಸಲಿದೆ. ಹಿಂದೂ ಗ್ರಂಥಗಳಲ್ಲಿ ಪಕ್ಷಿಗಳಿಗೆ ಹೆಚ್ಚಿನ ಮಹತ್ವವಿದೆ. ಇದೊಂದು ಉತ್ತಮ ಸಂದೇಶವಾಗಿದೆ” ಎಂದು ಬರೆದಿದ್ದಾರೆ.
ಈ ಘಟನೆಯು ಸಕಾರಾತ್ಮಕ ಶಕುನವನ್ನು ಸೂಚಿಸುತ್ತದೆ ಎಂದು ಹಲವರು ನಂಬಿದರೆ, ಇನ್ನು ಕೆಲವರು ಈ ವಿಚಿತ್ರ ಘಟನೆಯನ್ನು ಮುಂಬರುವ ಅಪಾಯಗಳ ಸಂಕೇತವಿರಬಹುದು ಎಂದು ಊಹಿಸಿದ್ದಾರೆ.
“ಈ ಘಟನೆಗೆ ನಿಜವಾದ ಕಾರಣವೇನೆಂದು ಯಾರಿಗೂ ತಿಳಿದಿಲ್ಲ. ಆದರೆ ಇದು ಮುಂಬರುವ ವಿಪತ್ತನ್ನು ಸೂಚಿಸುವ ಕೆಟ್ಟ ಶಕುನವಾಗಿರಬಹುದು. ನಾವೀಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸಾಧ್ಯವಾದಷ್ಟು ‘ಧರ್ಮ’ವನ್ನು ಹರಡುವುದು ಮತ್ತು ಆಚರಿಸುವುದು” ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ, “ಬಹುಶಃ ಇದು ಭಯಾನಕವಾದ ಏನೋ ಸಂಭವಿಸಲಿದೆ ಎಂಬುದರ ಎಚ್ಚರಿಕೆಯ ಸಂದೇಶವಾಗಿರಬಹುದು” ಎಂದು ಇನ್ನು ಕೆಲವರು ಅಂದಾಜಿಸಿದ್ದಾರೆ. ಆದರೆ, ಪುರಿ ಜಗನ್ನಾಥ ದೇವಾಲಯದ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.