ಬೆಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿ ದೃಷ್ಟಿಯಿಂದ ಸೋಮವಾರದಿಂದ (ಮೇ 26) ಹೊಸ ನಿಯಮಗಳು ಜಾರಿಗೆ ಬರಲಿವೆ. ಅದರಲ್ಲೂ, ಆಸ್ತಿ ಸೇರಿ ಯಾವುದೇ ದಾಖಲೆಗಳ ನೋಂದಣಿಗೆ ಸೋಮವಾರದಿಂದ ಇ-ಸೈನ್ (ಇ-ಸಹಿ) ಕಡ್ಡಾಯವಾಗಿದೆ. ಹಾಗಾಗಿ, ಆಸ್ತಿಗಳ ನೋಂದಣಿ, ದಾಖಲೆಗಳ ಡಿಜಿಟಲೀಕರಣದ ದೃಷ್ಟಿಯಿಂದ ಮಹತ್ವದ ಬದಲಾವಣೆ ಎನಿಸಿದೆ.
ಕಂದಾಯ ಇಲಾಖೆಯು ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಇದರಿಂದ ರಾಜ್ಯಾದ್ಯಂತ, ಆಸ್ತಿ ಹಾಗೂ ಇತರ ದಾಖಲೆಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿವೆ. ಕಾನೂನಿನ ಅನುಸಾರ ಹೊಸ ನಿಯಮಗಳು ಜಾರಿಯಾಗುತ್ತಿವೆ. ನೀವು ಯಾವುದೇ ಆಸ್ತಿ ಅಥವಾ ದಾಖಲೆಗಳ ನೋಂದಣಿ ಪ್ರಕ್ರಿಯೆಗಳು ಇನ್ಮುಂದೆ ಡಿಜಿಟಲೀಕರಣವಾಗಲಿದೆ. ಸೇಲ್ ಡೀಡ್, ಗಿಫ್ಟ್ ಡೀಡ್, ಲೀಸ್ ಡೀಡ್ ಸೇರಿ ಎಲ್ಲ ರೀತಿಯ ಡೀಡ್ಗಳ ಪ್ರಕ್ರಿಯೆಯು ಇನ್ನುಮುಂದೆ ಆರಂಭದಿಂದ ಅಂತ್ಯದವರೆಗೂ ಆನ್ ಲೈನ್ ಮೂಲಕ ನಡೆಯುತ್ತದೆ.
ನೀವು ಈ ಕಾಯ್ದೆಯಡಿ, ಡಿಜಿಟಲ್ ಡಾಕ್ಯುಮೆಂಟ್ ತಯಾರಿಕೆ, ಇ-ಸಹಿ, ಇ-ಸ್ಟಾಂಪಿಂಗ್, ಇ-ಚಲನ್ ಮೂಲಕ ಪಾವತಿ ಸೇರಿ ಎಲ್ಲಾ ಹಂತಗಳು ಡಿಜಿಟಲ್ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇದರಿಂದಾಗಿ ಪಾರದರ್ಶಕ ವ್ಯವಸ್ಥೆ ಜಾರಿಯಾಗುವ ಜತೆಗೆ ದಾಖಲೆಗಳ ಸುರಕ್ಷತೆ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯವಾಗುತ್ತಿದೆ. ಸ್ಟಾಂಪುಗಳ ದುರುಪಯೋಗ ಮತ್ತು ಸೋರಿಕೆ ತಡೆಯಲು ಅನುಕೂಲವಾಗಲಿದೆ. ಬ್ಯಾಂಕ್ ಚಲನ್ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ಕೂಡ ಇರುತ್ತದೆ. ವಿದ್ಯುನ್ಮಾನ ವಿಧಾನಗಳ ಮೂಲಕವೇ ಸ್ಟಾಂಪ್ ಶುಲ್ಕ ಪಾವತಿಸಬೇಕಾಗುತ್ತಿದೆ. ಹಾಗಾಗಿ, ಇದು ಮಹತ್ವದ ನಿರ್ಧಾರ ಎಂದೇ ವಿಶ್ಲೇಷಿಸಲಾಗುತ್ತಿದೆ.