ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದಾನೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
ಮಧ್ಯಾಹ್ನ 1ರಿಂದ 1:18ರ ಶುಭ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:40ರ ಬಳಿಕ ಆನೆಗೆ ಚಿನ್ನದ ಅಂಬಾರಿ ಕಟ್ಟಲಾಗುತ್ತೆ. ಸಂಜೆ 4:42ರಿಂದ 5:06 ಗಂಟೆಗೆ ಪುಷ್ಪಾರ್ಚನೆ ನೆರವೇರಲಿದ್ದು, ಬಳಿಕ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂಜಿನ ಕವಾಯತು ನೆರವೇರಲಿದೆ.
ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಜನರಿಗೆ ದಸರಾ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ಕೆಲ ಕಾಲ್ತುಳಿತ ಅವಘಢ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ. ಅಲ್ಲದೇ ಒಳಭಾಗದಲ್ಲಿ ಪೊಲೀಸ್ ಭದ್ರತೆ ಕೂಡ ಹೆಚ್ಚು ಮಾಡಿದೆ. ಇನ್ನೂ ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ದಸರಾ ವೀಕ್ಷಣೆಗೆ ಅವಕಾಶ ನೀಡಿಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಕೂಡ ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ.