ಬೆಂಗಳೂರು: ಕೆಲಸದ ಒತ್ತಡದಿಂದಾಗಿ ಈ ರೀತಿ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಮೂಗಿನಲ್ಲಿ ರಕ್ತಸ್ರಾವವಾಗಿದ್ದರಿಂದಾಗಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು 4 ಗಂಟೆ ಕಾಲ ಚಿಕಿತ್ಸೆ ಪಡೆದ ನಂತರ ಈಗ ಆಸ್ಪತ್ರೆಯಿಂದ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮೂರು ಬಾರಿ ಹೃದಯದ ವಾಲ್ ಬದಲಾವಣೆ ಆಗಿದೆ. ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒತ್ತಡ, ವಿಶ್ರಾಂತಿ ಪಡೆಯದೆ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.
ವೈದ್ಯರು ಈಗ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿಯಾಗಲು ಕಷ್ಟ ಆದರೆ, ನಿಖಿಲ್ ಭಾಗವಹಿಸುತ್ತಾನೆ. ನಾಳೆ ರಾಜ್ಯಸಭೆಯಲ್ಲಿ ಕಾವೇರಿ ನದಿ ನೀರಿನ ಪ್ರಸ್ತಾಪ ಬರಲಿದೆ. ಹಲವು ವರ್ಷಗಳಿಂದ ತಮಿಳುನಾಡು ಸಂಸದರು ಈ ಭಾಷಣಕ್ಕೆ ಅಡ್ಡಿ ಪಡಿಸುತ್ತಲೇ ಬಂದಿದ್ದಾರೆ. ಹೀಗಾಗಿ ಈ ವೇಳೆ ನಾನು ಸದನದಲ್ಲಿ ಇರಬೇಕು ಎನ್ನುವುದೇ ನನ್ನ ಆಸೆ ಎಂದು ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಚಿಕಿತ್ಸೆ ಪಡೆಯುತ್ತಿರುವ ಕುಮಾರಸ್ವಾಮಿ ಅವರು ಶೀಘ್ರ ಚೇತರಿಸಿಕೊಂಡು ಮತ್ತೆ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.