ಬೆಂಗಳೂರು: ಕುಡುಕ ಮಗನೊಬ್ಬ ವೃದ್ಧ ತಂದೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ರಾಜಾಜಿನಗರದ 4ನೇ ಬ್ಲಾಕ್ ನ 7 ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕುಡಿತದ ದಾಸನಾಗಿದ್ದ ರಘು(29) ಎಂಬ ಪಾಪಿ ಮಗನಿಂದಲೇ ತಂದೆ ರಾಮಚಂದ್ರ ಹತ್ಯೆಯಾಗಿದ್ದಾರೆ.
ಜ. 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾಗಿರುವ ರಾಮಚಂದ್ರ ಲಾರಿ ಡ್ರೈವರ್ ಆಗಿ ಜೀವನ ಸಾಗಿಸುತ್ತಿದ್ದರು. ಆದರೆ, ಮಗ ಕುಡಿತ ಚಟಕ್ಕೆ ಬಿದ್ದಿದ್ದಕ್ಕೆ ತೀವ್ರವಾಗಿ ನೊಂದಿದ್ದರು. ಹೀಗಾಗಿ ಮಗನಿಗೆ ಬುದ್ಧಿವಾದ ಹೇಳುತ್ತಿದ್ದರು. ಯಾವುದೇ ಕೆಲಸಕ್ಕೆ ಹೋಗದೆ ಮಗ ಪ್ರತಿ ದಿನ ಕುಡಿದು ಬಂದು ತಂದೆ-ತಾಯಿಗೆ ಕಿರುಕುಳ ನೀಡುತ್ತಿದ್ದ. ಕುಡಿಯಲು ಹಣ ನೀಡುವಂತೆ ಪ್ರತಿ ದಿನ ಪೀಡಿಸುತ್ತಿದ್ದ.
ಜ. 10ರಂದು ರಾತ್ರಿ ಕುಡಿದು ಬಂದು ಗಲಾಟೆ ಮಾಡಿಕೊಂಡಿದ್ದಾನೆ. ಆಗ ತಂದೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕುಡುಕ ಮಗ, ರಾಡ್ ನಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಕುಸಿದು ಬಿದ್ದ ತಂದೆ, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ರಾಜಾಜಿನಗರ ಪೊಲೀಸರು ಆರೋಪಿ ಮಗನನ್ನು ಜೈಲಿಗೆ ಅಟ್ಟಿದ್ದಾರೆ. ಇತ್ತ ಗಂಡನನ್ನು ಕಳೆದುಕೊಂಡಿದ್ದ ಮನೋರೋಗಿಯಾಗಿರುವ ವೃದ್ಧ ಹೆಂಡತಿ ಅನಾಥರಾಗಿದ್ದಾರೆ.