ಚೆನ್ನೈ : ಮದ್ಯದ ಅಮಲಿನಲ್ಲಿ ಆಟೋರಿಕ್ಷಾದಲ್ಲೇ ಕುಳಿತುಕೊಂಡು ವ್ಯಕ್ತಿಯೊಬ್ಬ ಪಾದಚಾರಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಘಟನೆ ನಡೆದೊಡನೆ 30 ವರ್ಷದ ಆರೋಪಿನನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ವ್ಯಕ್ತಿಯನ್ನು ಕಲೈಸೆಲ್ವನ್ (30) ಎಂದು ಗುರುತಿಸಲಾಗಿದೆ.
ಬುಧವಾರ ಕಲೈಸೆಲ್ವನ್ ತನ್ನ ಸ್ನೇಹಿತನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ಆತ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಆಟೋದಿಂದಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಈ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆ ಮತ್ತು ಆತನ ನಡುವೆ ತೀವ್ರ ವಾಕ್ಸಮರ ನಡೆದಿದೆ.
ಸಾರ್ವಜನಿಕರಿಂದ ಥಳಿಸಿ ಹತ್ಯೆ
ಇಬ್ಬರ ನಡುವಿನ ಜಗಳವನ್ನು ಕಂಡ ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ಅಲ್ಲಿ ಜಮಾಯಿಸಿದ್ದಾರೆ. ಕಲೈಸೆಲ್ವನ್ ಮಾಡಿದ್ದ ನೀಚ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಉದ್ರಿಕ್ತಗೊಂಡ ಗುಂಪು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಲು ಆರಂಭಿಸಿದೆ. ಜನರ ಸತತ ಹೊಡೆತಕ್ಕೆ ಸಿಲುಕಿದ ಕಲೈಸೆಲ್ವನ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ದಾರಿ ಮಧ್ಯೆಯೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ವ್ಯಕ್ತಿಯ ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಲು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಸಿಎಂ ಹಾಸ್ಟೆಲ್ ಮ್ಯಾನೇಜರ್ ಆತ್ಮಹತ್ಯೆ – ಕಾರಣ ನಿಗೂಢ!



















