ತಿರುಪತಿ: ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ತಿರುಪತಿಯ ಐತಿಹಾಸಿಕ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದ ಗೋಪುರವೇರಿ ಆತಂಕ ಸೃಷ್ಟಿಸಿದ ವಿಚಿತ್ರ ಘಟನೆ ನಡೆದಿದೆ. ತನಗೆ ಮದ್ಯ ನೀಡಿದರೆ ಮಾತ್ರ ಕೆಳಗೆ ಇಳಿಯುವುದಾಗಿ ಆತ ಪಟ್ಟು ಹಿಡಿದು ಕೆಲಕಾಲ ಹೈಡ್ರಾಮಾ ಸೃಷ್ಟಿಸಿದ್ದಾನೆ.
ನಿನ್ನೆ ತಡರಾತ್ರಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇಗುಲದ ಆವರಣ ಪ್ರವೇಶಿಸಿದ ಈತ, ಟೆಂಟ್ ಕಂಬಗಳ ಸಹಾಯದಿಂದ ‘ನಡಿಮಿ ಗೋಪುರ’ವನ್ನು ಏರಿ ನೇರವಾಗಿ ಗೋಪುರದ ಮೇಲಿರುವ ಕಳಶಗಳತ್ತ ತಲುಪಿದ್ದ. ಇದನ್ನು ಗಮನಿಸಿದ ಜಾಗೃತ ದಳದ ಸಿಬ್ಬಂದಿ ಮತ್ತು ಭಕ್ತರು ಆತಂಕಗೊಂಡು ತಕ್ಷಣವೇ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ಮದ್ಯದ ಬಾಟಲಿಗೆ ಪಟ್ಟು
ಗೋಪುರದ ತುತ್ತತುದಿಯನ್ನು ತಲುಪಿದ್ದ ವ್ಯಕ್ತಿ, ತನಗೆ ‘ಕ್ವಾರ್ಟರ್ ಬಾಟಲ್’ ಮದ್ಯ ಬೇಕೆಂದು ಕೂಗಾಡಲಾರಂಭಿಸಿದನು. ಮದ್ಯ ಕೊಟ್ಟರೆ ಮಾತ್ರ ಕೆಳಗೆ ಬರುವುದಾಗಿ, ಇಲ್ಲದಿದ್ದರೆ ಅಲ್ಲಿಯೇ ಇರುವುದಾಗಿ ಬೆದರಿಕೆ ಹಾಕಿದನು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವ ಸಲುವಾಗಿ ಆತನ ಬೇಡಿಕೆಗೆ ಒಪ್ಪಿಗೆ ಸೂಚಿಸಿದರು. ಬಳಿಕ ಆತ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಕೆಳಗೆ ಇಳಿದು ಬಂದನು.
ಆರೋಪಿ ಬಂಧನ
ಕೆಳಗೆ ಇಳಿಯುತ್ತಿದ್ದಂತೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಆತನನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಪೆದ್ದಮಲ್ಲ ರೆಡ್ಡಿ ಕಾಲೋನಿ ನಿವಾಸಿ ಕುಟ್ಟಾಡಿ ತಿರುಪತಿ (45) ಎಂದು ಗುರುತಿಸಲಾಗಿದೆ. ಕುಡಿದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ರಂಪಾಟ ಮಾಡಿದ್ದಕ್ಕಾಗಿ ಮತ್ತು ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತೆ ವರ್ತಿಸಿದ್ದಕ್ಕಾಗಿ ತಿರುಪತಿ ಪೂರ್ವ ಠಾಣೆಯ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿಎಸ್‌ಪಿ ಎಂ. ಭಕ್ತವತ್ಸಲಂ ನಾಯ್ಡು ತಿಳಿಸಿದ್ದಾರೆ.
\ಇದನ್ನೂ ಓದಿ ; ಛತ್ತೀಸ್‌ಗಢದ ಸುಕ್ಮಾದಲ್ಲಿ ಮತ್ತೊಂದು ಎನ್‌ಕೌಂಟರ್ | 12ಕ್ಕೂ ಹೆಚ್ಚು ನಕ್ಸಲರ ಹತ್ಯೆ



















