ಬಾಗಲಕೋಟೆ : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಯ ತಲೆ ಬೋಳಿಸಿರುವ ಘಟನೆ ನಡೆದಿದೆ. ಇದಕ್ಕೆ ಊರಿನ ಹಿರಿಯನೊಬ್ಬ ಕೂಡ ಸಾಥ್ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀದೇವಿ ದೇವರವರ(22) ಎಂಬ ಮಹಿಳೆಯ ತಲೆಯನ್ನು ಪತಿ ಬೋಳಿಸಿ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶ್ರೀದೇವಿ ಪತಿ ಬಸಪ್ಪ ಹಾಗೂ ಸದಾಶಿವ ನ್ಯಾಮಗೌಡ ಎಂಬುವವರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.
ಬಸಪ್ಪ ಕುಡಿದು ಬಂದು ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿ ತವರು ಮನೆ ಸೇರಿದ್ದರು. ತವರು ಮನೆಯಲ್ಲಿ ಸಖಿ ತಂಡ ಕೌನ್ಸೆಲಿಂಗ್ ನಡೆಸಿದ ನಂತರ ಶ್ರೀದೇವಿ ಮರಳಿ ಗಂಡನ ಮನೆಗೆ ಬಂದಿದ್ದರು. ಕಳೆದ ಎರಡು ತಿಂಗಳ ಹಿಂದೆ ಶ್ರೀದೇವಿ ಗಂಡನ ಮನೆ ಸೇರಿದ್ದರು. ಆದರೆ, ಮತ್ತೆ ಕುಡಿದು ಬಂದು ಬಸಪ್ಪ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿಯೂ ಪತಿ ಹಾಗೂ ಪತ್ನಿ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ಬಳಿಕ ರಾತ್ರಿ ಅರ್ಧ ತಲೆ ಬೋಳಿಸಿ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತ್ನಿ ಶ್ರೀದೇವಿ ಗಾಯಗೊಂಡಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.



















