ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದಲ್ಲಿ ಹೆಚ್ಚಿನ ಜನಸಂದಣಿಯಿದ್ದ ಮಾರುಕಟ್ಟೆ ಪ್ರದೇಶವೊಂದರ ಮೇಲೆ ಟಿವಿ ಧಾರಾವಾಹಿಯ ನಿರ್ದೇಶಕರೊಬ್ಬರು ಏಕಾಏಕಿ ಕಾರು ಹರಿಸಿದ್ದು(Accident News), ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ.
ಘಟನೆ ವೇಳೆ ಬಂಗಾಳಿ ಮನರಂಜನಾ ಚಾನೆಲ್‌ವೊಂದರ ಕಾರ್ಯಕಾರಿ ನಿರ್ಮಾಪಕ ಹಾಗೂ ಖ್ಯಾತ ಧಾರಾವಾಹಿ ನಿರ್ದೇಶಕರು ಕಾರಿನಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆಯೇ, ಕಾರನ್ನು ತಡೆದ ಸ್ಥಳೀಯರು ಒಳಗಿದ್ದವರನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರಿನೊಳಗಿದ್ದವರನ್ನು ರಕ್ಷಿಸಲು ಮುಂದಾದರು. ಈ ವೇಳೆ ಕಾರಲ್ಲಿದ್ದ ಶ್ರೀಯಾ ಬಸು ಎಂಬವರು ಕುಡಿದ ಮತ್ತಿನಲ್ಲಿದ್ದು, ನಿಂತಲ್ಲಿಯೇ ರಸ್ತೆಗೆ ಕುಸಿದುಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಗಾಳಿ ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕ ಸಿದ್ಧಾಂತ ದಾಸ್ ಅಲಿಯಾಸ್ ವಿಕ್ಟೋ ಅವರೇ ಕಾರು ಚಲಾಯಿಸುತ್ತಿದ್ದರು. ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕಿ ಶ್ರೀಯಾ ಬಸು ಅವರನ್ನು ಪೊಲೀಸರು ಉದ್ರಿಕ್ತ ಜನರಿಂದ ರಕ್ಷಿಸಿ, ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರೂ ಮದ್ಯ ಸೇವಿಸಿದ್ದರು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ಧಾಂತ್ ಹಾಗೂ ಶ್ರೀಯಾ ಅವರು ರಾತ್ರಿ ಪೂರ್ತಿ ಪಾರ್ಟಿಯಲ್ಲಿದ್ದರು. ಕೋಲ್ಕತ್ತಾದ ಸೌತ್ ಸಿಟಿ ಮಾಲ್ ನಲ್ಲಿರುವ ಪಬ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ನಡೆದಿತ್ತು. ರಾತ್ರಿ 2 ಗಂಟೆಯ ವೇಳೆಗೆ ಪಾರ್ಟಿಯಲ್ಲಿದ್ದ ಇತರರು ಮನೆಗೆ ತೆರಳಿದ್ದರು. ಆದರೆ, ಇವರಿಬ್ಬರೂ ನಂತರವೂ ಕುಡಿತ ಮುಂದುವರಿಸಿ, ಬೆಳಗಿನ ಜಾವದ ವೇಳೆಗೆ ಕಾರಿನಲ್ಲಿ ನಗರವಿಡೀ ಸುತ್ತಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮುಂಜಾನೆ ಅವರ ಕಾರು ಠಾಕೂರ್ ಪುರ ಮಾರುಕಟ್ಟೆಗೆ ನುಗ್ಗಿದ್ದು, ಪಾದಚಾರಿಗಳ ಮೇಲೆಯೇ ಹರಿದಿದೆ. ಆಗ ಬೆಳಗ್ಗೆ 9.30 ಆಗಿತ್ತು. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಜನರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕಾರು ನುಗ್ಗಿದ ಕಾರಣ, ಸ್ಥಳದಲ್ಲೇ ಒಬ್ಬ ವ್ಯಕ್ತಿ ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಕೋಲ್ಕತ್ತಾ ಮಹಾನಗರ ಪಾಲಿಕೆಯ ಕಾರ್ಮಿಕ ಹಾಗೂ ಸ್ಥಳೀಯ ಸಿಪಿಎಂ ನಾಯಕ ಅಮೀನುರ್ ರೆಹಮಾನ್ ಎಂದು ಗುರುತಿಸಲಾಗಿದೆ.