ನವದೆಹಲಿ: ಹಲವು ವರ್ಷಗಳಿಂದಲೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಸ್ವಲ್ಪದರಲ್ಲೇ ತಪ್ಪಿಸಿಕೊಳ್ಳುತ್ತಿದ್ದ ಲೇಡಿ ಡಾನ್ ಝೋಯಾ ಖಾನ್(33) ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯವುಳ್ಳ 270 ಗ್ರಾಂ ಹೆರಾಯಿನ್‌ನೊಂದಿಗೆ ಆಕೆ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ಈಕೆ ನೊಟೋರಿಯಸ್ ಗ್ಯಾಂಗ್‌ಸ್ಟರ್ ಹಶೀಮ್ ಬಾಬಾನ ಪತ್ನಿ. ಪತಿ ಜೈಲು ಸೇರಿದ ಬಳಿಕ ಆತನ ಇಡೀ ಕ್ರಿಮಿನಲ್ ಸಾಮ್ರಾಜ್ಯವನ್ನು ತನ್ನ ಮುಷ್ಟಿಗೆ ತೆಗೆದುಕೊಂಡಿದ್ದ ಝೋಯಾ ಖಾನ್, ಎಲ್ಲಿಯೂ ಅಕ್ರಮ ಚಟುವಟಿಕೆಗಳಲ್ಲಿ ತನ್ನ ಹೆಸರು ಬಾರದಂತೆ, ತನ್ನ ವಿರುದ್ಧ ನೇರವಾದ ಸಾಕ್ಷ್ಯಗಳು ಲಭ್ಯವಾಗದಂತೆ ಈ ಮಾದಕದ್ರವ್ಯ ಸಾಮ್ರಾಜ್ಯವನ್ನು ನಡೆಸುತ್ತಿದ್ದಳು. ಪ್ರತಿ ಬಾರಿಯೂ ಇನ್ನೇನು ಸಿಕ್ಕುತ್ತಾಳೆ ಅನ್ನುವಷ್ಟರಲ್ಲಿ ಕಾನೂನು ಜಾರಿ ಸಂಸ್ಥೆಗಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದಳು. ಹಲವು ಅಕ್ರಮಗಳಲ್ಲಿ ಆಕೆಯ ಪಾತ್ರದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದರೂ, ಇಂದಿನವರೆಗೂ ಅವರಿಗೆ ಆಕೆಯ ವಿರುದ್ಧ ಗಟ್ಟಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ.
ಹಶೀಮ್ ಬಾಬಾ ವಿರುದ್ಧ ಕೊಲೆ, ಸುಲಿಗೆಯಿಂದ ಹಿಡಿದು ಶಸ್ತ್ರಾಸ್ತ್ರ ಕಳ್ಳಸಾಗಣೆವರೆಗೆ ಡಜನ್ ಗಟ್ಟಲೆ ಪ್ರಕರಣಗಳು ದಾಖಲಾಗಿವೆ. ಆತನ 3ನೇ ಪತ್ನಿಯೇ ಝೋಯಾ ಖಾನ್. 2017ರಲ್ಲಿ ಹಶೀಮ್ ಬಾಬಾ ಝೋಯಾಳನ್ನು ಮದುವೆಯಾಗಿದ್ದ. ಅದಕ್ಕೂ ಮೊದಲೇ ಆಕೆಗೆ ಬೇರೊಬ್ಬನೊಂದಿಗೆ ವಿವಾಹವಾಗಿತ್ತು. ಆತನೊಂದಿಗೆ ವಿಚ್ಛೇದನದ ನಂತರ, ಅವಳು ಬಾಬಾನ ಸಂಪರ್ಕಕ್ಕೆ ಬಂದಳು. ಇಬ್ಬರೂ ಈಶಾನ್ಯ ದೆಹಲಿಯಲ್ಲಿ ಅಕ್ಕಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದರು. ಅಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತು.
ಕ್ರಿಮಿನಲ್ ಸಾಮ್ರಾಜ್ಯ
ಹಶೀಮ್ ಬಾಬಾ ಜೈಲು ಸೇರಿದ ನಂತರ, ಇಡೀ ಗ್ಯಾಂಗ್‌ನ ಕಾರ್ಯಾಚರಣೆಯ ಹೊಣೆಯನ್ನು ಝೋಯಾ ವಹಿಸಿಕೊಂಡಳು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಗ್ಯಾಂಗನ್ನು ಒಂದು ಕಾಲದಲ್ಲಿ ಹೇಗೆ ಆತನ ಸಹೋದರಿ ಹಸೀನಾ ಪಾರ್ಕರ್ ನಿಭಾಯಿಸಿದ್ದಳೋ, ಅದೇ ರೀತಿ ಹಶೀಮ್ ಬಾಬಾನ ಅಕ್ರಮಗಳ ಜಗತ್ತನ್ನು ಪತ್ನಿ ಝೋಯಾ ನಿಭಾಯಿಸತೊಡಗಿದಳು. ಸುಲಿಗೆ ಮತ್ತು ಮಾದಕವಸ್ತು ಪೂರೈಕೆ ಡೀಲ್ ಗಳನ್ನು ಝೋಯಾ ನಿರ್ವಹಿಸುತ್ತಿದ್ದಳು ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಮೂಲಗಳು ತಿಳಿಸಿವೆ.
ಆದರೆ ಆಕೆ ಹೊರಜಗತ್ತಿಗೆ ತನ್ನ ನೈಜ ಬಣ್ಣವನ್ನು ತೋರಿಸಿರಲಿಲ್ಲ. ಸಮಾಜದಲ್ಲಿ ಇಮೇಜ್ ಉಳಿಸಿಕೊಂಡು, ಹೈಪ್ರೊಫೈಲ್ ಪಾರ್ಟಿಗಳು, ಐಷಾರಾಮಿ ಉಡುಗೆಗಳನ್ನು ತೊಡುತ್ತಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡು, ಭಾರೀ ಸಂಖ್ಯೆಯ ಫಾಲೋವರ್ ಗಳನ್ನೂ ಹೊಂದಿದ್ದಳು.
ಆಗಾಗ್ಗೆ ತಿಹಾರ್ ಜೈಲಿಗೆ ಹೋಗಿ ತನ್ನ ಗಂಡನನ್ನು ಭೇಟಿಯಾಗಿ ಬರುತ್ತಿದ್ದಳು. ಗ್ಯಾಂಗ್‌ನ ಹಣಕಾಸು ಮತ್ತು ಇತರೆ ಕಾರ್ಯಾಚರಣೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಹಶೀಮ್ ಬಾಬಾ ಆಕೆಗೆ ಕೋಡ್ ವರ್ಡ್ ಮೂಲಕ ತರಬೇತಿ ನೀಡಿದ್ದ, ಜೊತೆಗೆ ಹಲವು ಟಿಪ್ಸ್ ಗಳನ್ನೂ ನೀಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆ ಜೈಲಿನ ಹೊರಗಿರುವ ಬಾಬಾನ ಸಹಚರರು ಮತ್ತು ಇತರೆ ಕ್ರಿಮಿನಲ್ ಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಳು.
ಹಲವು ವರ್ಷಗಳಿಂದ, ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಅಪರಾಧ ವಿಭಾಗವು ಅವಳನ್ನು ಹಿಡಿಯಲು ಬಲೆ ಹೆಣೆಯುತ್ತಲೇ ಇತ್ತು. ಇಷ್ಟು ವರ್ಷಗಳ ಪರಿಶ್ರಮ ಈಗ ಫಲ ಕೊಟ್ಟಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಈಶಾನ್ಯ ದೆಹಲಿಯ ದ್ವಾರದಲ್ಲೇ ಝೋಯಾಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ. ಉತ್ತರ ಪ್ರದೇಶದ ಮುಜಾಫರ್ ನಗರದಿಂದ ತಂದಿದ್ದ ಕೋಟಿಗಟ್ಟಲೆ ಬೆಲೆಬಾಳುವ ಭಾರೀ ಪ್ರಮಾಣದ ಹೆರಾಯಿನ್‌ನೊಂದಿಗೆ ಆಕೆ ಬಲೆಗೆ ಬಿದ್ದಿದ್ದಾಳೆ.
ನಾದಿರ್ ಶಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶೂಟರ್‌ಗಳಿಗೆ ಆಶ್ರಯ ನೀಡಿದ್ದವರ ಪೈಕಿ ಝೋಯಾ ಕೂಡ ಒಬ್ಬಳು ಎಂದು ಪೊಲೀಸರು ಶಂಕಿಸಿದ್ದಾರೆ. ದಕ್ಷಿಣ ದೆಹಲಿಯ ಐಷಾರಾಮಿ ಗ್ರೇಟರ್ ಕೈಲಾಶ್ -1 ಪ್ರದೇಶದ ಜಿಮ್ ಮಾಲೀಕ ನಾದಿರ್ ಶಾ ಅವರನ್ನು ಸೆಪ್ಟೆಂಬರ್ 2024 ರಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.
ಕೌಟುಂಬಿಕ ಹಿನ್ನೆಲೆ
ಝೋಯಾಗೆ ಅಪರಾಧ ಎನ್ನುವುದೇ ತನ್ನ ಕುಟುಂಬದ ಉದ್ಯಮ. ಲೈಂಗಿಕ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದಕ್ಕಾಗಿ ಆಕೆಯ ತಾಯಿ 2024ರಲ್ಲಿ ಬಂಧಿತಳಾಗಿ, ನಂತರ ಜಾಮೀನಿನ ಮೇರೆಗೆ ಹೊರಗೆ ಬಂದಿದ್ದಾಳೆ. ಇನ್ನು ಝೋಯಾಳ ತಂದೆ ಕೂಡ ಮಾದಕವಸ್ತು ಸರಬರಾಜು ಜಾಲದೊಂದಿಗೆ ಸಂಪರ್ಕ ಹೊಂದಿದ್ದರು. ಝೋಯಾ ಸ್ವತಃ ಈಶಾನ್ಯ ದೆಹಲಿಯ ವಿವಿಧ ಸ್ಥಳಗಳಿಂದ, ವಿಶೇಷವಾಗಿ ಉಸ್ಮಾನ್ಪುರದಿಂದ ತನ್ನ ಡ್ರಗ್ಸ್ ಜಾಲವನ್ನು ನಿಭಾಯಿಸುತ್ತಿದ್ದಳು. ತನ್ನ ಪತಿಯ ನಿಷ್ಠಾವಂತ ಸಹಚರರಾದ 4-5 ಸಶಸ್ತ್ರಧಾರಿ ಹಿಂಬಾಲಕರು ಆಕೆಗೆ ಸದಾ ಭದ್ರತೆ ಒದಗಿಸುತ್ತಿದ್ದರು
ಈಶಾನ್ಯ ದೆಹಲಿ ಪ್ರದೇಶವು ದೀರ್ಘಕಾಲದಿಂದ ಛೆನು ಗ್ಯಾಂಗ್, ಹಶೀಮ್ ಬಾಬಾ ಗ್ಯಾಂಗ್ ಮತ್ತು ನಾಸಿರ್ ಪೆಹಲ್ವಾನ್ ಗ್ಯಾಂಗ್ ಸೇರಿದಂತೆ ಕ್ರಿಮಿನಲ್ ಗ್ಯಾಂಗ್ ಗಳನ್ನು ಕಂಡಿದೆ. ಈ ಗ್ಯಾಂಗ್ ಗಳು ಆರಂಭದಲ್ಲಿ ಮಾದಕವಸ್ತು ಕಳ್ಳಸಾಗಣೆ ಮೇಲೆ ಗಮನ ಕೇಂದ್ರೀಕರಿಸಿದ್ದರೂ, ಅವರ ನಡುವೆಯೇ ಸಂಘರ್ಷಗಳು ಆರಂಭವಾಗಿ 2007ರ ಬಳಿಕ ಸರಣಿ ಹಿಂಸಾತ್ಮಕ ಕೊಲೆಗಳಿಗೂ ಕಾರಣವಾದವು.