ಬಳ್ಳಾರಿ: ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪಿದ ಪ್ರಕರಣ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಬಳ್ಳಾರಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಡ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಆತಂಕ ಮನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ಖಡಕ್ ವಾರ್ನಿಂಗ್ ನೀಡುತ್ತಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವೈದ್ಯಕೀಯ ಸಿಬ್ಬಂದಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋದ ಅಧ್ಯಕ್ಷ ಡಾ. ನಾಗಲಕ್ಷ್ಮೀ ಚೌದರಿ ಅವರು ಶುಕ್ರವಾರ (ಡಿ.13) ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಆಸ್ಪತ್ರೆಗೆ ಸರಬರಾಜು ಆಗುವ ನೀರಿನ ಟ್ಯಾಂಕ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಬಾಣಂತಿಯರ ಸಾವಿಗೆ ಕೇವಲ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾತ್ರ ಕಾರಣವಲ್ಲ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿನ ಅಸ್ವಚ್ಛತೆ ಸೇರಿದಂತೆ ಅಜಾಗರೂಕತೆಯ ಹಲವು ಕಾರಣಗಳು ಇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಣಂತಿಯರ ಸಾವಿಗೆ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾತ್ರ ಕಾರಣವಲ್ಲ. ಹೆರಿಗೆಯಾದ ಶಸ್ತ್ರಚಿಕಿತ್ಸಾ ಕೊಠಡಿ ಕೂಡ ಕಾರಣವಾಗಿರಬಹುದು. ಶಸ್ತ್ರಚಿಕಿತ್ಸೆಯಾದ ಬಳಿಕ ನಂಜು, ಬ್ಯಾಕ್ಟೀರಿಯಾದಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶಸ್ತ್ರಚಿಕಿತ್ಸಾ ಕೊಠಡಿಯ ಗಾಳಿ, ಗೋಡೆ, ಟೇಬಲ್ ಇಡೀ ಹರಿಗೆ ಸ್ವ್ಯಾಬ್ ಸ್ಯಾಂಪಲ್ ವರದಿ ಬೇಕಿದೆ. ಶಸ್ತ್ರಚಿಕಿತ್ಸಾ ಕೊಠಡಿಯಿಂದಲೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ವಚ್ಛತೆ ಇಲ್ಲದಿದ್ದರೆ ಇನ್ಫೆಕ್ಷನ್ ಆಗಿ ಬಾಣಂತಿಯರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅದರ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.