ಬೆಂಗಳೂರು : ನಗರದ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ ವಿದೇಶಿ ಫುಟ್ಬಾಲ್ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಕ್ಷಿಣ ಆಫ್ರಿಕಾ ಮೂಲದ ಕೊರ್ಲಿ ಡೇನಿಯಲ್ ಎಂದು ಗುರುತಿಸಲಾಗಿದೆ.
ಆರೋಪಿ ಸ್ಪೋರ್ಟ್ಸ್ ವೀಸಾದಡಿ ಬೆಂಗಳೂರಿಗೆ ಬಂದಿದ್ದನು. ಆಗಾಗ ಕೇರಳದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಜೀವನ ಸಾಗಿಸಲು ಆತ ಡ್ರಗ್ ಪೆಡ್ಲಿಂಗ್ ಕೃತ್ಯದಲ್ಲಿ ತೊಡಗಿದ್ದಾನೆ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗೋವಿಂದಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಸುಮಾರು 4 ಲಕ್ಷ 48 ಸಾವಿರ ರೂ. ಮೌಲ್ಯದ 56 ಗ್ರಾಂ ಎಂಡಿಎಮ್‌ಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಿಡದಿ ಬಳಿ ಹಳಿ ತಪ್ಪಿದ ರೈಲು.. ತಪ್ಪಿದ ಭಾರೀ ಅನಾಹುತ!



















