ಕ್ಯಾರಕಾಸ್: ವೆನೆಜುವೆಲಾದ ಅಧ್ಯಕ್ಷೀಯ ಭವನವಾದ ‘ಮಿರಾಫ್ಲೋರೆಸ್’ ಬಳಿ ಡ್ರೋನ್‌ಗಳು ಪತ್ತೆಯಾಗಿದ್ದು, ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಅಮೆರಿಕದ ಪಡೆಗಳಿಂದ ವೆನೆಜುವೆಲಾದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಬಂಧನಕ್ಕೊಳಗಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಇಡೀ ರಾಷ್ಟ್ರದಲ್ಲಿ ಆತಂಕದ ಛಾಯೆ ಆವರಿಸಿದೆ.
ಸೋಮವಾರ ತಡರಾತ್ರಿ ಅಧ್ಯಕ್ಷೀಯ ಭವನದ ಮೇಲೆ ಹಾಗೂ ಸುತ್ತಮುತ್ತ ಕೆಲವು ಡ್ರೋನ್‌ಗಳು ಹಾರಾಟ ನಡೆಸುತ್ತಿದ್ದವು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಅವುಗಳತ್ತ ಗುಂಡು ಹಾರಿಸಿದ್ದಾರೆ. ಭವನದ ಸಮೀಪ ಭಾರಿ ಗುಂಡಿನ ಸದ್ದು ಕೇಳಿಬಂದಿದ್ದು, ಪ್ರಮುಖ ಸರ್ಕಾರಿ ಕಚೇರಿಗಳನ್ನು ತೆರವುಗೊಳಿಸಲಾಗಿದೆ. ಇದೇ ವೇಳೆ, ಭದ್ರತಾ ಪಡೆಗಳ ನಡುವಿನ “ತಪ್ಪು ತಿಳುವಳಿಕೆ”ಯಿಂದ ಈ ಗುಂಡಿನ ಚಕಮಕಿ ಸಂಭವಿಸಿರಬಹುದು ಎಂದು ಕೆಲವು ಮೂಲಗಳು ತಿಳಿಸಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರಾದರೂ, ರಾಜಧಾನಿ ಕ್ಯಾರಕಾಸ್‌ನಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.
ಮಡುರೊ ಬಂಧನ ಮತ್ತು ರಾಜಕೀಯ ಬಿಕ್ಕಟ್ಟು:
ಕಳೆದ ಶನಿವಾರ ಅಮೆರಿಕದ ವಿಶೇಷ ಪಡೆಗಳು ಕ್ಯಾರಕಾಸ್‌ನಲ್ಲಿ ದೊಡ್ಡಮಟ್ಟದ ಕಾರ್ಯಾಚರಣೆ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದಿವೆ. ಮಾದಕವಸ್ತು ಸಾಗಣೆಯ ಆರೋಪ ಎದುರಿಸುತ್ತಿರುವ ಮಡುರೊ ಅವರನ್ನು ಸೋಮವಾರ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. “ನಾನು ನಿರ್ದೋಷಿ, ನಾನು ಇಂದಿಗೂ ನನ್ನ ದೇಶದ ಅಧ್ಯಕ್ಷ” ಎಂದು ಮಡುರೊ ವಾದಿಸಿದ್ದಾರೆ.
ಇನ್ನೊಂದೆಡೆ ಮಡುರೊ ಬಂಧನದ ಬೆನ್ನಲ್ಲೇ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೊಡ್ರಿಗಸ್ ಅವರು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಭಾರತೀಯರಿಗೆ ಸಲಹೆ:
ವೆನೆಜುವೆಲಾದಲ್ಲಿನ ಈ ಅನಿರೀಕ್ಷಿತ ಮಿಲಿಟರಿ ದಾಳಿ ಮತ್ತು ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗೆ ವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿದೆ. ಜತೆಗೆ, ಏನೇ ಸಮಸ್ಯೆ, ಸವಾಲುಗಳು ಎದುರಾದರೂ ಅಲ್ಲಿರುವ ಭಾರತೀಯರು ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: 5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ | ಬಸವರಾಜ ರಾಯರೆಡ್ಡಿ



















