ಬೆಂಗಳೂರು : ಮದ್ಯಪಾನ ಮಾಡಿ ಶಾಲಾ ಬಸ್ಗಳನ್ನು ಚಾಲನೆ ಮಾಡುವ ಚಾಲಕರಿಗೆ ಬೆಂಗಳೂರು ಸಂಚಾರ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ 9.30ರ ವರೆಗೆ ಬೆಂಗಳೂರಿನ ವಿವಿಧೆಡೆ ಶಾಲಾ ಬಸ್ ಚಾಲಕರ ತಪಾಸಣೆ ಮಾಡಲಾಗಿದ್ದು, ಒಟ್ಟು 5,881 ಡ್ರೈವರ್ಗಳನ್ನು ಪರೀಕ್ಷಿಸಲಾಗಿದೆ.
ಆ ಪೈಕಿ 36 ಮಂದಿ ಮದ್ಯ ಸೇವಿಸಿ ಬಸ್ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪಾನಮತ್ತ ಚಾಲಕರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಡಿಎಲ್ ರದ್ದುಪಡಿಸುವಂತೆ RTOಗೆ ಸಂಚಾರಿ ಪೊಲೀಸರು ಪತ್ರ ಬರೆದು ಸೂಚನೆ ನೀಡಿದ್ಧಾರೆ.
ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಸಂಬಂಧ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಶಾಲಾ ವಾಹನ ಚಾಲಕರಿಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಹಲವರು ಕುಡಿದು ವಾಹನ ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.



















