ಬೆಂಗಳೂರು: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕೋ, ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ವಾಹನ ನಿಲ್ಲಿಸಿದ್ದಕ್ಕೋ, ಸಿಗ್ನಲ್ ಜಂಪ್ ಮಾಡಿದ್ದಕ್ಕೋ ಟ್ರಾಫಿಕ್ ಫೈನ್ ಬಿದ್ದಿರುತ್ತದೆ. ಈಗಂತೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಆನ್ ಲೈನ್ ನಲ್ಲೇ ಫೋಟೋಗಳನ್ನು ಅಪ್ ಲೋಡ್ ಮಾಡಿಯೇ ಫೈನ್ ವಿಧಿಸಲಾಗುತ್ತದೆ. ಆ ದಂಡವನ್ನು (Traffic Fine) ತಿಂಗಳು, ವರ್ಷಗಟ್ಟಲೇ ಜನ ಕಟ್ಟುವುದಿಲ್ಲ. ಇದಕ್ಕೆ ಲಗಾಮು ಹಾಕಲು ಸಂಚಾರ ನಿಯಮಗಳನ್ನು ಬಿಗಿಗೊಳಿಸಿದ್ದು, ಇನ್ನುಮುಂದೆ ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗುತ್ತದೆ.
ಹೌದು, ಏಪ್ರಿಲ್ 1ರಿಂದಲೇ ಕರ್ನಾಟಕ ಸೇರಿ ದೇಶಾದ್ಯಂತ ಹೊಸ ನಿಯಮಗಳು ಜಾರಿಗೆ ಬಂದಿವೆ. ಇ-ಚಲನ್ ಮೂಲಕ ವಿಧಿಸಲಾದ ದಂಡವನ್ನು ಮೂರು ತಿಂಗಳೊಳಗೆ ಪಾವತಿಸದಿದ್ದರೆ, ಅವರ ವಾಹನ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತುಗೊಳಿಸಲಾಗುತ್ತದೆ. ಮೂರು ಬಾರಿ ಟ್ರಾಫಿಕ್ ರೆಡ್ ಲೈಟ್ ಉಲ್ಲಂಘನೆ ಮಾಡಿದರೆ ಅಥವಾ ಅಜಾಗರೂಕತೆಯಿಂದ ವಾಹನ ಚಲಿಸಿದರೂ ಕೂಡ ಲೈಸೆನ್ಸ್ ಸಸ್ಪೆಂಡ್ ಆಗುವುದನ್ನು ತಪ್ಪಿಸಲಾಗುವುದಿಲ್ಲ.
ಇತ್ತೀಚಿನ ವರದಿ ಪ್ರಕಾರ, ಚಲನ್ಗಳ ವಸೂಲಾತಿ ಪ್ರಮಾಣ ಕೇವಲ ಶೇ.40ರಷ್ಟಿದೆ. ದೆಹಲಿಯಲ್ಲಿ ಶೇ.14, ಕರ್ನಾಟಕದಲ್ಲಿ ಶೇ. 21 ದರದೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ, ಸರ್ಕಾರ ಚಲನ್ ಪಾವತಿಸದ ವಾಹನ ಮಾಲೀಕರ ವಿಮಾ ಪ್ರೀಮಿಯಂ ಹೆಚ್ಚಿಸುವ ಯೋಜನೆ ರೂಪಿಸುತ್ತಿದೆ. ಜತೆಗೆ, ಮಾಸಿಕ ಎಚ್ಚರಿಕೆ ಸಂದೇಶಗಳ ಮೂಲಕ ವಾಹನ ಮಾಲೀಕರಿಗೆ ದಂಡ ಪಾವತಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ದಂಡದ ದೃಷ್ಟಿಯಿಂದ ಮಾತ್ರವಲ್ಲ, ನಾಗರಿಕ ಪ್ರಜ್ಞೆಯ ದೃಷ್ಟಿಯಿಂದಲೂ ನಾವು ಸಂಚಾರ ನಿಯಮಗಳನ್ನು ಪಾಲಿಸಬೇಕು. ಅತಿವೇಗದ ಚಾಲನೆ, ಅಜಾಗರೂಕ ಚಾಲನೆ, ಮೊಬೈಲ್ ಬಳಸುತ್ತಾ ವಾಹನ ಓಡಿಸುವುದು ಇತ್ಯಾದಿ ಉಲ್ಲಂಘನೆಗಳಿಂದ ದೂರವಿರುವುದು ನಮ್ಮ ಮತ್ತು ಇತರರ ಜೀವ ರಕ್ಷಣೆ ಮಾಡಬಹುದು. ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಕಾರಣವೆಂದರೆ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತದೆ.