ಬೆಂಗಳೂರು: ಬಿಬಿಎಂಪಿ 8 ವಲಯಗಳ ಪೈಕಿ ಒಂದೊಂದು ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಕ್ಕೆ ಚಾಲನೆ ನೀಡಲಾಯಿತು.
ಇದು ಯಶಸ್ವಿಯಾದರೆ ಎಲ್ಲಾ ಕಡೆ ಅನುಷ್ಠಾನಗೊಳಿಸಲಾಗುವುದೆಂದು ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ. ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲ ವಲಯಗಳ ಆಯ್ದ ಸ್ಥಳಗಳಲ್ಲಿ ಇಂದು ಶ್ವಾನ ಮಹೋತ್ಸವ(ಕುಕುರ್ ತಿಹಾರ್) ಆಚರಿಸಲಾಗಿದ್ದು, ಪಾಲಿಕೆ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪೌರಕಾರ್ಮಿಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಹೋಟೆಲ್ ಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡಲಾಗುತ್ತದೆ. ಸಮುದಾಯ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದು ಇದರ ಪ್ರಮುಖ ಉದ್ದೇಶ ಎಂದಿದ್ದಾರೆ.
ಪಾಲಿಕೆಯ 8 ವಲಯುಗಳಲ್ಲಿ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದಿದ್ದಾರೆ. ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಆನಂತರ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.