ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ‘ಹಾಂಗ್‌ಕ್ವಿ ಸೇತುವೆ’ಯ ಒಂದು ಭಾಗ ಮಂಗಳವಾರ ಏಕಾಏಕಿ ಕುಸಿದು ಬಿದ್ದಿದೆ. ಸೇತುವೆ ಕುಸಿಯುತ್ತಿರುವ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿರ್ಮಾಣದ ಗುಣಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.
ಮಧ್ಯ ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದ 758 ಮೀಟರ್ ಉದ್ದದ ಈ ಸೇತುವೆಯನ್ನು ಈ ವರ್ಷವಷ್ಟೇ ಪೂರ್ಣಗೊಳಿಸಿ, ಸೆಪ್ಟೆಂಬರ್ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ ಸೇತುವೆ ನಾಮಾವಶೇಷವಾಗಿದೆ.
ಸೇತುವೆಯ ಬಳಿ ಇರುವ ಇಳಿಜಾರು ಮತ್ತು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಹಾಗೂ ಭೂಪ್ರದೇಶದಲ್ಲಿ ಬದಲಾವಣೆಗಳನ್ನು ಗಮನಿಸಿದ್ದರಿಂದ, ಅಧಿಕಾರಿಗಳು ಸೋಮವಾರವೇ ಸೇತುವೆಯನ್ನು ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಿದ್ದರು. ಈ ಮುನ್ನೆಚ್ಚರಿಕಾ ಕ್ರಮದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಕಡಿದಾದ ಪರ್ವತ ಪ್ರದೇಶದಲ್ಲಿನ ಭೂವೈಜ್ಞಾನಿಕ ಅಸ್ಥಿರತೆಯೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಘಟನೆಯ ನಂತರ, ಸೇತುವೆಯ ವಿನ್ಯಾಸ ಅಥವಾ ನಿರ್ಮಾಣದಲ್ಲಿ ಯಾವುದೇ ದೋಷಗಳಿವೆಯೇ ಎಂದು ಪತ್ತೆಹಚ್ಚಲು ಸಮಗ್ರ ತಾಂತ್ರಿಕ ತನಿಖೆಗೆ ಆದೇಶಿಸಲಾಗಿದೆ. ಈ ಹೆದ್ದಾರಿಯನ್ನು ಮತ್ತೆ ಯಾವಾಗ ಸಂಚಾರಕ್ಕೆ ತೆರೆಯಲಾಗುವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ : ಕೇಂದ್ರ ಸರ್ಕಾರದ BEL ಸಂಸ್ಥೆಯಲ್ಲಿ52 ಹುದ್ದೆಗಳ ನೇಮಕ: 55 ಸಾವಿರ ರೂ. ಸಂಬಳ


















