ಲಕ್ನೋ: ನಾಟಕೀಯ ಬೆಳವಣಿಗೆಯೊಂದರಲ್ಲಿ, ಜಿಲ್ಲಾ ಪ್ರವೇಶವನ್ನು ನಿಷೇಧಿಸಿದ್ದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದ ಸಮಾಜವಾದಿ ಪಕ್ಷದ ನಾಯಕ ಕೈಶ್ ಖಾನ್ ಅವರನ್ನು ಉತ್ತರ ಪ್ರದೇಶದ ಕನೌಜ್‌ನಲ್ಲಿ ಬಂಧಿಸಲಾಗಿದೆ. ಕೈಶ್ ಖಾನ್ ಅವರು ಅವರ ಸಹೋದರನ ಮನೆಯಲ್ಲಿ ಪತ್ತೆಯಾಗಿದ್ದು, ವಿಶೇಷವೆಂದರೆ ಅವರು ಆ ಮನೆಯ ಮೇಲಂತಸ್ತಿನಲ್ಲಿ ಹಾಸಿಗೆಯೊಂದರ ಹಿಂದೆ ಅಡಗಿಕುಳಿತಿದ್ದರು. ಅವರನ್ನು ಪತ್ತೆಹಚ್ಚಿ, ಹಾಸಿಗೆಯನ್ನು ಸರಿಸಿ ಪೊಲೀಸರು ಖಾನ್‌ರನ್ನು ಬಂಧಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರೆಂದು ಹೇಳಲಾಗುವ ಕೈಶ್ ಖಾನ್ ಅವರಿಗೆ ಕನೌಜ್ ಜಿಲ್ಲಾಧಿಕಾರಿ ಅಶುತೋಷ್ ಮೋಹನ್ ಅಗ್ನಿಹೋತ್ರಿ ಅವರು ಜುಲೈ 28ರಂದು ಆರು ತಿಂಗಳ ಕಾಲ ಜಿಲ್ಲೆಯನ್ನು ಪ್ರವೇಶಿಸದಂತೆ ಆದೇಶಿಸಿದ್ದರು. ಅಂದಿನಿಂದ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ಕೈಶ್ ಖಾನ್, ಬುಧವಾರ ತಮ್ಮ ಬಾಲಾಪೀರ್ ಬಡಾವಣೆಯಲ್ಲಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿ ಆಧರಿಸಿ ಪೊಲೀಸರು ಅವರ ನಿವಾಸ ಮತ್ತು ಸಹೋದರನ ಮನೆಯಲ್ಲಿ ಶೋಧ ನಡೆಸಿದಾಗ, ಆರಂಭದಲ್ಲಿ ಅವರು ಪತ್ತೆಯಾಗಿರಲಿಲ್ಲ. ನಂತರ, ಒಂದು ಕೋಣೆಯಲ್ಲಿದ್ದ ಮಂಚದ ಮೇಲಿನ ಹಾಸಿಗೆಯ ಹಿಂದೆ ಅಡಗಿಕೊಂಡಿದ್ದ ಖಾನ್ ರನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. “ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಬಂಧಿಸಲಾಯಿತು. ನಂತರ, ನಮ್ಮಿಂದ ತಪ್ಪಿಸಿಕೊಳ್ಳಲು ಮೇಲಂತಸ್ತಿನಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ,” ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ
ಕೈಶ್ ಖಾನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದು, ಗೂಂಡಾ ಕಾಯ್ದೆಯ ಸೆಕ್ಷನ್ 3 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ವಿನೋದ್ ಕುಮಾರ್ ಹೇಳಿದ್ದಾರೆ. ಈ ವರ್ಷದ ಜನವರಿ 6ರಂದು, ಪುರಸಭೆ ಪ್ರದೇಶದಲ್ಲಿ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಕೈಶ್ ಖಾನ್ ಅವರ ಕಲ್ಯಾಣ ಮಂಟಪದ ಮೇಲೆ ಬುಲ್ಡೋಜರ್ ಹರಿಸಿ ಕ್ರಮ ಕೈಗೊಳ್ಳಲಾಗಿತ್ತು. ಜುಲೈ 25ರಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕನೌಜ್‌ಗೆ ಭೇಟಿ ನೀಡಿ ಕೈಶ್ ಖಾನ್ ಅವರನ್ನು ಭೇಟಿಯಾಗಿದ್ದರು. ಅದಾದ ಮೂರು ದಿನಗಳ ನಂತರ, ಜುಲೈ 28ರಂದು ಅವರಿಗೆ ಜಿಲ್ಲಾ ಪ್ರವೇಶ ನಿಷೇಧ ಹೇರಲಾಗಿತ್ತು.