ಬೆಂಗಳೂರು: ಹುಬ್ಬಳ್ಳಿ ನಗರದ ಹಿರಿಯ ವೈದ್ಯ ಡಾ.ಗೋ.ಹ.ನರೇಗಲ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಡಾ.ಗೋ.ಹ.ನರೇಗಲ್ ಎಂದು ಪ್ರಸಿದ್ಧರಾದ ಅವರು, ಹುಬ್ಬಳ್ಳಿಯಲ್ಲಿ 60 ವರ್ಷಗಳ ಹಿಂದೆ ತಮ್ಮ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿ ನಗರದ ಪ್ರಸಿದ್ಧ ಜನಪ್ರಿಯ ವೈದ್ಯರಾಗಿದ್ದರು. ಅವರು, ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸ್ವಯಂಸೇವಕರಾಗಿದ್ದು, ಸಂಘದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ಆರೆಸ್ಸೆಸ್‍ನ ಹುಬ್ಬಳ್ಳಿ ಮಹಾನಗರದ ಸಂಘ ಚಾಲಕರಾಗಿ ಹಿಂದೂ ಸಮಾಜದ ಸಂಘಟನೆಯ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು.
ಡಾ.ಗೋ.ಹ.ನರೇಗಲ್ ಅವರು ತಮ್ಮ ವೃತ್ತಿಯ ಜೊತೆ ಹಿಂದೂ ಸಮಾಜವನ್ನು ಸಂಘಟಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಜೀವನವು ಪ್ರೇರಣಾದಾಯಿಯಾಗಿದೆ ಎಂದು ಹೇಳಿದ್ದಾರೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬ, ಹಿತೈಷಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.