ತುಮಕೂರು: ಕಲ್ಪತರುನಾಡು ತುಮಕೂರಿನಲ್ಲಿ ನಾಡಹಬ್ಬ ದಸರಾಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅದ್ದೂರಿ ಚಾಲನೆ ನೀಡಿದ್ದಾರೆ.
ತುಮಕೂರಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಅರಮನೆ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಭವ್ಯ ದಸರಾ ಧಾರ್ಮಿಕ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ, ಲಕ್ಷ್ಮೀದೇವಿ ಪ್ರತಿಷ್ಠಾಪನೆ ಮಾಡಲಾಗಿದ್ದು, ನಾಡದೇವತೆ ಚಾಮುಂಡೇಶ್ವರಿ ಶೈಲ ಪುತ್ರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು.
ಪೂಜೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಾಡದೇವತೆ ಚಾಮುಂಡೇಶ್ವರಿ ಹಾಗೂ ಲಕ್ಷ್ಮೀ ದೇವಿಗೆ ಉಸ್ತುವಾರಿ ಸಚಿವ ಪರಮೇಶ್ವರ್ ಪೂಜೆ ಸಲ್ಲಿಸಿದರು.
ಧಾರ್ಮಿಕ ಮಂಟಪದಲ್ಲಿ ನಡೆದ ಲಕ್ಷೀ ಹೋಮ, ಸರಸ್ವತಿ ಹೋಮ, ಗಣಪತಿ ಹೋಮ, ಲಕ್ಷ್ಮೀ ನಾರಾಯಣ ಹೋಮವನ್ನು ಸಚಿವ ಪರಮೇಶ್ವರ್ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಕೆ.ಎನ್.ರಾಜಣ್ಣ, ಪತ್ನಿ ಶಾಂತಲಾ ರಾಜಣ್ಣ, ಶಾಸಕರಾದ ಸುರೇಶ್ ಗೌಡ, ಜ್ಯೋತಿಗಣೇಶ್, ಸುರೇಶ್ ಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಪ್ರಭು ಜಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಎಸ್ಪಿ ಅಶೋಕ್ ಕೆ.ವಿ ಹಲವರು ಭಾಗಿಯಾಗಿದ್ದರು.