ನವದೆಹಲಿ: ಇಲ್ಲಿನ ಕ್ರಿಕೆಟ್ ಅಂಗಳದಲ್ಲಿ ಇದೀಗ ಭಾರೀ ಸಂಚಲನ ಮೂಡಿದೆ. ಜುಲೈ 6 ಮತ್ತು 7 ರಂದು ನಡೆಯಲಿರುವ 2025ರ ಡೆಲ್ಲಿ ಪ್ರೀಮಿಯರ್ ಲೀಗ್ (DPL) ಹರಾಜು ಪ್ರಕ್ರಿಯೆಯಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್ ಸೇರಿದಂತೆ ಹತ್ತು ಮಂದಿ ಐಪಿಎಲ್ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ರಿಷಭ್ ಪಂತ್ ಜೊತೆಗೆ, ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಥಿ ಮತ್ತು ಪ್ರತಿಭಾವಂತ ಪ್ರಿಯಾಂಶ ಆರ್ಯ ಕೂಡ ಈ ಹರಾಜಿನಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ. ಪುರುಷರ ಹರಾಜಿನ ನಂತರ, ಜುಲೈ 7 ರಂದು ಮಹಿಳೆಯರ ಹರಾಜು ಪ್ರಕ್ರಿಯೆ ನಡೆಸುವುದು ಸಹ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (DDCA) ಈಗಾಗಲೇ ಡೆಲ್ಲಿ ಪ್ರೀಮಿಯರ್ ಲೀಗ್‌ಗೆ ಎರಡು ಹೊಸ ತಂಡಗಳನ್ನು ಸೇರಿಸುವುದಾಗಿ ಘೋಷಿಸಿದ್ದು, ಇದು ಎರಡನೇ ಸೀಸನ್ ಅನ್ನು ಇನ್ನಷ್ಟು ರೋಚಕಗೊಳಿಸಲಿದೆ. ಉದ್ಘಾಟನಾ ಆವೃತ್ತಿಯಲ್ಲಿ ಕೇವಲ ಆರು ತಂಡಗಳಿದ್ದವು. ಆದರೆ ಈಗ ತಂಡಗಳ ಸಂಖ್ಯೆಯನ್ನು ಎಂಟಕ್ಕೆ ಏರಿಸಲಾಗಿದೆ.
ಇತ್ತೀಚೆಗೆ ನಡೆದ ಪ್ರಾಂಚೈಸಿ ಖರೀದಿ ಪ್ರಕ್ರಿಯೆಯಲ್ಲಿ, ಸವಿತಾ ಪೇಂಟ್ಸ್ ಪ್ರೈವೇಟ್ ಲಿಮಿಟೆಡ್ ನೇತೃತ್ವದ ಒಕ್ಕೂಟವು ಔಟರ್ ಡೆಲ್ಲಿ ಫ್ರಾಂಚೈಸಿಯನ್ನು 10.6 ಕೋಟಿ ರೂ.ಗೆ ತನ್ನದಾಗಿಸಿಕೊಂಡಿದೆ. ಮತ್ತೊಂದೆಡೆ, ಭೀಮಾ ಟೋಲಿಂಗ್ ಮತ್ತು ಟ್ರಾಫಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೇಯಾನ್ ಅಡ್ವರ್ಟೈಸಿಂಗ್ ಲಿಮಿಟೆಡ್‌ನ ಒಕ್ಕೂಟವು ನವದೆಹಲಿ ಫ್ರಾಂಚೈಸಿಯನ್ನು 9.2 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ.

ಈ ವರ್ಷದ ಟೂರ್ನಿಗಾಗಿ, ಈ ಎರಡು ಹೊಸ ತಂಡಗಳು ಈಗಾಗಲೇ ಇರುವ ಆರು ಫ್ರಾಂಚೈಸಿಗಳಾದ ಸೆಂಟ್ರಲ್ ಡೆಲ್ಲಿ ಕಿಂಗ್ಸ್, ಈಸ್ಟ್ ಡೆಲ್ಲಿ ರೈಡರ್ಸ್, ನಾರ್ತ್ ಡೆಲ್ಲಿ ಸ್ಟ್ರೈಕರ್ಸ್, ಪುರಾನಿ ಡಿಲ್ಲಿ 6, ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ವೆಸ್ಟ್ ಡೆಲ್ಲಿ ಲಯನ್ಸ್ ಜೊತೆಗೂಡಿ ಪೈಪೋಟಿ ನಡೆಸಲಿವೆ. ಜುಲೈ 6 ರಂದು ನಡೆಯುವ ಹರಾಜಿನಲ್ಲಿ ರಿಷಭ್ ಪಂತ್ ಅವರೊಂದಿಗೆ, ಇಶಾಂತ್ ಶರ್ಮಾ, ಆಯುಷ್ ಬದೋನಿ, ಹರ್ಷಿತ್ ರಾಣಾ, ಹಿಮಾತ್ ಸಿಂಗ್, ಸುಯಶ್ ಶರ್ಮಾ, ಮಯಾಂಕ್ ಯಾದವ್ ಮತ್ತು ಅನುಜ್ ರಾವತ್ ಅವರಂತಹ ಪ್ರಮುಖ ಐಪಿಎಲ್ ಆಟಗಾರರು ಸಹ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.
ಡಿಡಿಸಿಎ ಅಧ್ಯಕ್ಷ ರೋಹನ್ ಜೆಟ್ಲಿ ಡೆಲ್ಲಿ ಪ್ರೀಮಿಯರ್ ಲೀಗ್ ಕೇವಲ ಒಂದು ಕ್ರಿಕೆಟ್ ಟೂರ್ನಿಯಲ್ಲ, ಇದು ರಾಜಧಾನಿಯ ಆಳವಾಗಿ ಬೇರೂರಿರುವ ಕ್ರಿಕೆಟ್ ಸಂಸ್ಕೃತಿಯ ನಿಜವಾದ ಆಚರಣೆ ಎಂದು ಹೇಳಿದ್ದಾರೆ. ಸೀಸನ್ ಒಂದರಲ್ಲಿ ಹಲವಾರು ಅಪ್ರತಿಮ ಪ್ರತಿಭೆಗಳು ಬೆಳಕಿಗೆ ಬಂದಿದ್ದವು ಮತ್ತು ಲೀಗ್‌ನ ವಿಸ್ತರಣೆಯು ಇನ್ನಷ್ಟು ಆಟಗಾರರಿಗೆ ಅವಕಾಶ ಕಲ್ಪಿಸಲಿದೆ ಎಂದು ಅವರು ವಿವರಿಸಿದರು.
ಪ್ರಿಯಾಂಶ ಆರ್ಯ ಮತ್ತು ದಿಗ್ವೇಶ್ ಸಿಂಗ್ ರಾಥಿ ಸೇರಿದಂತೆ ಡಿಪಿಎಲ್‌ನ ಹಲವು ಆಟಗಾರರು 2025ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವುದು, ಭವಿಷ್ಯದ ತಾರೆಗಳನ್ನು ಪೋಷಿಸುವಲ್ಲಿ ಈ ಲೀಗ್‌ನ ಮೌಲ್ಯವನ್ನು ಸಾಬೀತುಪಡಿಸುತ್ತದೆ ಎಂದು ಜೆಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜುಲೈನಲ್ಲಿ ನಡೆಯುವ ಹರಾಜಿನೊಂದಿಗೆ ಈ ವರ್ಷದ ಡಿಪಿಎಲ್‌ನ ಕಾರ್ಯ ಪ್ರಕ್ರಿಯೆ ಆರಂಭವಾಗಲಿದೆ. ಫ್ರಾಂಚೈಸಿಗಳು, ಆಟಗಾರರು ಮತ್ತು ಅಭಿಮಾನಿಗಳ ಅನುಭವ ಸುಗಮ ಮತ್ತು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಎರಡನೇ ಆವೃತ್ತಿಯ ಈ ಲೀಗ್ ಪ್ರಯಾಣದಲ್ಲಿ ಒಂದು ಹೆಗ್ಗುರುತಾಗಿ ಮಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಜೆಟ್ಲಿ ತಿಳಿಸಿದ್ದಾರೆ.
ನವದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣವು ಮತ್ತೊಮ್ಮೆ ಈ ಭವ್ಯ ಟೂರ್ನಿಗೆ ಆತಿಥ್ಯ ವಹಿಸಲಿದೆ. ಹರಾಜು ಪ್ರಕ್ರಿಯೆ ಮುಗಿದ ಬಳಿಕ ತಂಡಗಳ ಆಟಗಾರರು, ಟೂರ್ನಿಯ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಪ್ರಕಟಿಸಲಾಗುವುದು. ಈ ಬಾರಿ ಡಿಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಸಜ್ಜಾಗಿದೆ.