ಬೆಂಗಳೂರು : ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದು, ದೂರಿನನ್ವಯ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
“ದೂರಿನಲ್ಲಿ ಏನಿದೆ?”
ನಾನು ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆಯಾದೆವು. ಪವನ್ ಓದಿರದ ಕಾರಣ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರು. ಇದರಿಂದಾಗಿ ನಾನೇ ಕೆಲಸಕ್ಕೆ ಹೋಗಿ ಮನೆ ಸಾಗಿಸುತ್ತಿದ್ದೆ. ನಂತರ ಪವನ್ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು. ಇದಕ್ಕಾಗಿ ನನ್ನ ಬಳಿ ದುಡ್ಡು ಕೇಳಿದ್ದರು. ಆಗ ನನ್ನ ತಾಯಿಯ ಒಡವೆ ಕೊಟ್ಟಿದ್ದೆ. ಆದರೆ ಬಳಿಕ ಲಾಸ್ ಆಗಿ ಇನ್ಸ್ಟಿಟ್ಯೂಟ್ ಮುಚ್ಚಬೇಕಾದ ಪರಿಸ್ಥಿತಿ ಬಂದಿತ್ತು. ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ಟರು ಸಹ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಜಗಳ ಆಗಿ ನನ್ನನ್ನು ಮನೆಯಿಂದ ಆಚೆ ಹಾಕಿದ್ದರು. ಇದರಿಂದ ನನಗೆ ಹಾಗೂ ನನ್ನ ಮಗನಿಗೆ ತೊಂದರೆಯಾಗುತ್ತೆ, ಒಂದು ವೇಳೆ ಏನಾದರೂ ಆದರೆ ಇವರುಗಳೇ ಕಾರಣ ಎಂದು ಆರೋಪಿಸಿ, ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
“ಎಸ್. ನಾರಾಯಣ್ ಸಮರ್ಥನೆ !”
ವರದಕ್ಷಿಣೆ ಕಿರುಕುಳ ಆರೋಪ ತಳ್ಳಿ ಹಾಕಿದ ಎಸ್.ನಾರಾಯಣ್, ಪವಿತ್ರಾ ನಮ್ಮ ಮನೆ ಬಿಟ್ಟು ಒಂದು ವರ್ಷ ಕಳೆದಿದೆ. ನನಗೆ ಈ ಆರೋಪದಿಂದ ಆಘಾತವೇನೂ ಆಗಿಲ್ಲ. ಪವಿತ್ರಾ ಮಾಡಿದ ಕೆಲಸ ಹೇಳಿದರೆ ಹೆಸರಿಗೆ ಮಸಿ ಬಳಿದಂತಾಗುತ್ತದೆ. ಆಕೆ ವಯಸ್ಸಿಗೆ ಯಾವತ್ತು ಬೆಲೆ ಕೊಟ್ಟಿಲ್ಲ. ಪವಿತ್ರಾ ಮನೆಗೆ ಬಂದ ಮೇಲೆ ಮಾತುಕತೆಯೇ ಇರಲಿಲ್ಲ. ಹೀಗಾಗಿ ವರದಕ್ಷಿಣೆ ಪ್ರಕರಣ ಕೆಲವರಿಗೆ ಅಸ್ತ್ರವಾಗಿ ಹೋಗಿದೆ. ಪವನ್ ಪತ್ನಿ ಪವಿತ್ರ ಕೂಡ ಅದನ್ನು ಬಳಸಿಕೊಳ್ಳುತ್ತಿದ್ದಾಳೆ. ವರದಕ್ಷಿಣೆ ಶಾಪ ಎಂದು ನಾನು ಸಿನೆಮಾ ಮಾಡಿದ್ದೇನೆ. ನಾನು ಇಂತಹ ಕೆಲಸಕ್ಕೆ ಕೈ ಹಾಕುತ್ತೇನಾ ಎಂದು.ನಾರಾಯಣ್ ಪ್ರಶ್ನಿಸಿದ್ದಾರೆ.


















