ಕೋಲಾರ: ಸಂಸಾರದಲ್ಲಿ ಅನುಮಾನದ ಹುತ್ತ ಇರಬಾರದು ಅಂತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಅದೇ ಕಾರಣಕ್ಕೆ ಪತ್ನಿಯೊಬ್ಬರು ಪತಿಯಿಂದಲೇ ಹತ್ಯೆಯಾಗಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು(Malur) ತಾಲೂಕಿನ ವಿಜುವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಎಂಬುವವರನ್ನು ಪತಿ ಭರತ್ ಹತ್ಯೆ ಮಾಡಿದ್ದಾನೆ. ಆರೋಪಿಯು ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಚಾಕುವಿನಿಂದ ಬರೋಬ್ಬರಿ 18 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇವರಿಬ್ಬರಿಗೂ ವಿವಾಹವಾಗಿತ್ತು. ಆರಂಭದಲ್ಲಿ ಇಬ್ಬರೂ ಅನೋನ್ಯವಾಗಿಯೇ ಇದ್ದರು. ಆದರೆ, ಇತ್ತೀಚೆಗೆ ಡ್ರೈವರ್ ಕೆಲಸ ಮಾಡುತ್ತಿದ್ದ ಭರತ್ ಗೆ ತನ್ನ ಪತ್ನಿಯ ಮೇಲೆ ಅನುಮಾನ ಹೆಚ್ಚಾಗಿದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಆತನಿಗೆ ಶುರುವಾಗಿತ್ತು. ಹೀಗಾಗಿ ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಹೀಗಾಗಿ ದಿವ್ಯಾ ತನ್ನ ತವರು ಮನೆ ಸೇರಿದ್ದಳು. ಮನೆಗೆ ನುಗ್ಗಿ ಆರೋಪಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.