ಬೆಂಗಳೂರು: ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹಿರಿಯ ನಾಗರಿಕರ ಪಾತ್ರವೂ ಇದೆ. ಹಿರಿಯ ನಾಗರಿಕರು ಹೆಚ್ಚಾಗಿ ಬ್ಯಾಂಕುಗಳಲ್ಲಿಯೇ ಉಳಿತಾಯ ಖಾತೆ, ನಿಶ್ಚಿತ ಠೇವಣಿ ಖಾತೆ ತೆರೆದು ಹಣವನ್ನು ಠೇವಣಿ, ಹೂಡಿಕೆ ಮಾಡುತ್ತಾರೆ. ಆದರೆ, 70 ವರ್ಷದ ದಾಟಿದ ಹಿರಿಯ ನಾಗರಿಕರು ಪ್ರತಿ ಬಾರಿಯೂ ಬ್ಯಾಂಕಿಗೆ ಹೋಗಲು ಆಗುವುದಿಲ್ಲ ಅಥವಾ ಕಷ್ಟವಾಗುತ್ತಿದೆ. ಇದನ್ನು ಮನಗಂಡ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹಲವು ಸೇವೆಗಳನ್ನು ನೀಡುತ್ತಿದೆ.
ಹೌದು, ಆರ್ ಬಿಐ ನೂತನ ನಿಯಮಗಳ ಪ್ರಕಾರ, ಯಾವುದೇ ಬ್ಯಾಂಕ್ ಆಗಲಿ ಹಿರಿಯ ನಾಗರಿಕರು ಬಯಸಿದರೆ, ಅವರ ಮನೆ ಬಾಗಿಲಿಗೆ ತೆರಳಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಹಿರಿಯ ನಾಗರಿಕರಿಗೆ ಹಣ ವಿತ್ ಡ್ರಾ, ಚೆಕ್ ಬುಕ್, ಕೆವೈಸಿ ಸೇರಿ ಹಲವು ಸೇವೆಗಳನ್ನು ಅವರ ಮನೆಬಾಗಿಲಿಗೇ ನೀಡಬೇಕು ಎಂದು ತಿಳಿಸಲಾಗಿದೆ.
ಬ್ಯಾಂಕಿನ ಬ್ರ್ಯಾಂಚ್ ನಿಂದ 5 ಕಿಲೋಮೀಟರ್ ಒಳಗೆ ಗ್ರಾಹಕರ ಮನೆ ಇದ್ದರೆ, ಇದಕ್ಕೆ ಯಾವುದೇ ಚಾರ್ಜ್ ವಿಧಿಸಬಾರದು ಎಂದು ಕೂಡ ಆರ್ ಬಿಐ ಸೂಚಿಸಿದೆ. ಇದರಿಂದಾಗಿ ಹಿರಿಯ ನಾಗರಿಕರು ಮನೆಯಿಂದಲೇ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಇದರಿಂದ ಅವರು ಬ್ಯಾಂಕಿಗೆ ಹೋಗುವುದು ತಪ್ಪುತ್ತದೆ.
ಇದಿಷ್ಟೇ ಅಲ್ಲ, ಹಿರಿಯ ನಾಗರಿಕರಿಗೆ ಬ್ಯಾಂಕುಗಳಲ್ಲಿ ಪ್ರತ್ಯೇಕ ಸೀನಿಯರ್ ಸಿಟಿಜನ್ ಕೌಂಟರ್ ಇರಬೇಕು. ಅಲ್ಲಿ ಅವರಿಗೆ ಕುಳಿತುಕೊಳ್ಳಲು ಆಸನ, ಫ್ಯಾನ್ ಹಾಗೂ ನೀರಿನ ವ್ಯವಸ್ಥೆ ಮಾಡಿರಬೇಕು ಎಂದು ಆರ್ ಬಿಐ ಆದೇಶಿಸಿದೆ. ಅಲ್ಲದೆ, ಬ್ಯಾಂಕ್ ಠೇವಣಿಗಳಿಗೆ ನೀಡುವ ಬಡ್ಡಿಯಲ್ಲಿ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರಿಗೆ ಶೇ.0.75ರಷ್ಟು ಹೆಚ್ಚಿನ ಬಡ್ಡಿ ನೀಡಬೇಕು ಎಂದು ಕೂಡ ಆದೇಶಿಸಿದೆ. ಇದಕ್ಕೂ ಮೊದಲು ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಹೆಚ್ಚಿನ ಬಡ್ಡಿದರ ನೀಡಬೇಕು ಎಂಬುದು ಆರ್ ಬಿಐ ಆದೇಶವಾಗಿತ್ತು.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 4 ಹುದ್ದೆಗಳು : 60 ಸಾವಿರ ರೂ. ಸಂಬಳ



















