ನವದೆಹಲಿ: ವಾರಕ್ಕೆ 70ಕ್ಕೂ ಅಧಿಕ ಗಂಟೆ ಕೆಲಸ ಮಾಡಿ ಎಂದು ಇನ್ಫೋಸಿಸ್ (Infosys) ಮುಖ್ಯಸ್ಥ ನಾರಾಯಣ ಮೂರ್ತಿ(narayana murthy) ಇತ್ತೀಚೆಗಷ್ಟೇ ಹೇಳುವ ಮೂಲಕ ದುಡಿಯುವ ವರ್ಗದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದರು. ಅವರ ಈ ಹೇಳಿಕೆಗೆ ನಮಗೆ ಖಾಸಗಿ ಬುದುಕು ಇಲ್ಲವೇ? ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ. ಇದೀಗ ಅವರ ದಾಟಿಯಲ್ಲಿಯೇ ಎಲ್&ಟಿ(L&T) ಮುಖ್ಯಸ್ಥರೂ ಮಾತನಾಡಿದ್ದಾರೆ. ಇದು ಕೂಡ ವಿವಾದ ಉಂಟು ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
‘ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಂಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು. ಬೆನ್ನು ಬಗ್ಗಿಸಿ ದುಡಿಯಲು ಭಾನುವಾರದ ರಜೆಯನ್ನೂ ತ್ಯಜಿಸಬೇಕಾಗುತ್ತದೆ ’ ಎಂದು ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥರಾಗಿರುವ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆ ನೀಡಿದ್ದಾರೆ.
ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಿಸಬೇಕು ಎಂಬ ವಾದ ಎಲ್&ಟಿ ಕಂಪನಿಯಿಂದ ಕೇಳಿ ಬರುತ್ತಿದೆ. ಆದರೆ, ಅಲ್ಲಿನ ಸಿಬ್ಬಂದಿಗಳು ಶನಿವಾರ ಮತ್ತು ಭಾನುವಾರ ಕೂಡ ರಜೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಉದ್ಯೋಗಿಗಳನ್ನು ಉದ್ದೇಶಿಸಿ ಅವರು ಮಾತನಾಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ.
‘ನಿಮ್ಮ ಕಡೆಯಿಂದ ಭಾನುವಾರವೂ ಕೆಲಸ ಮಾಡಿಸಬೇಕು ಎಂಬ ಯೋಚನೆ ಇದೆ. ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನನಗೆ ವಿಷಾದವಾಗುತ್ತಿದೆ. ನಾನು ಭಾನುವಾರವೂ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಅಂದು ನಿಮ್ಮಿಂದ ಕೆಲಸ ಮಾಡಿಸಲು ನನಗೆ ಸಾಧ್ಯವಾದರೆ ನಾನು ಹೆಚ್ಚು ಸಂತೋಷ ಪಡುತ್ತೇನೆ’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಯಾವ ದಿನದಂದು ಈ ಹೇಳಿಕೆ ನೀಡಿದ್ದಾರೆ ಎಂಬುವುದು ತಿಳಿದುಬಂದಿಲ್ಲ. ಆ ಬಗ್ಗೆ ಹೆಚ್ಚಿನ ಪರಿಶೀಲನೆಯೂ ನಡೆದಿಲ್ಲ.
ಹೆಂಡತಿ ಮುಖ ನೋಡಬೇಡಿ, ಆಫೀಸ್‌ಗೆ ಬನ್ನಿ
‘ಒಂದು ಕಂಪನಿಯ ಉದ್ಯೋಗಿಯಾಗಿರುವ ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ. ಎಷ್ಟು ಹೊತ್ತು ಹೆಂಡತಿಯ ಮುಖವನ್ನೇ ನೋಡುತ್ತಾ ಕುಳಿತುಕೊಳ್ಳುವುದಕ್ಕೆ ಸಾಧ್ಯ. ಆಕೆಯೂ ಎಷ್ಟು ಹೊತ್ತು ನಿಮ್ಮ ಮುಖ ನೋಡಿಕೊಂಡು ಇರುತ್ತಾಳೆ . ಹಾಗಾಗಿ, ಕಚೇರಿಗೆ ಬಂದು ಕೆಲಸ ಮಾಡಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ’ ಎಂದು ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಅಧ್ಯಕ್ಷರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ(Social media) ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿವಾದವಾಗುತ್ತಿರುವುದರಿಂದ ಎಚ್ಚೆತ್ತುಕೊಂಡ ಕಂಪನಿ ಈ ಕುರಿತು ಸ್ಪಷ್ಟನೆ ನೀಡಿದೆ. ‘ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಿದೆ. ಈ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡುವ ಬಗ್ಗೆ ಅಧ್ಯಕ್ಷರು ಒತ್ತಿ ಹೇಳಿದ್ದಾರೆ’ ಎಂದು ಪ್ರತಿಕ್ರಿಯಿಸಿದೆ.
ಸುಭದ್ರ ರಾಷ್ಟ್ರ ನಿರ್ಮಾಣವೇ ಎಲ್ ಆ್ಯಂಡ್ ಟಿ ಕಂಪನಿ ಧ್ಯೇಯ. ಕಳೆದ ಎಂಟು ದಶಕದಿಂದಲೂ ಇದೇ ಹಾದಿಯಲ್ಲಿ ಸಾಗಿದೆ. ದೇಶದಲ್ಲಿ ಮೂಲಸೌಕರ್ಯ, ಕೈಗಾರಿಕೆ ಮತ್ತು ತಂತ್ರಜ್ಞಾನದ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.