Champions Trophy: ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ತಂಡಗಳ ಜರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು ವರದಿಯಾಗಿದೆ.
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ (Champions Trophy 2025) ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಭದ್ರತಾ ಕಾರಣದಿಂದ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದ ಭಾರತ, ಇದೀಗ ತನ್ನ ತಂಡದ ಜರ್ಸಿಯಲ್ಲಿ ಪಾಕಿಸ್ತಾನದ ಹೆಸರು ಮುದ್ರಿಸಲು ನಿರಾಕರಿಸಿದೆ.
ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಆಡು ತಂಡಗಳ ಜರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಹಾಕಲು ನಿರಾಕರಿಸಿದೆ ಎಂಬುದಾಗಿ ವರದಿಯಾಗಿದೆ.
ಈ ಹಿಂದೆ ಭಾರತದ ಆತಿಥ್ಯದಲ್ಲಿ ನಡೆದಿದ್ದ ಎಲ್ಲ ಐಸಿಸಿ ಟೂರ್ನಿಯಲ್ಲಿ ಪಾಕ್ ತಂಡ ಐಸಿಸಿ ನಿಯಮದಂತೆ ಭಾರತದ ಹೆಸರನ್ನು ತನ್ನ ಜೆರ್ಸಿಯಲ್ಲಿ ಹಾಕಿತ್ತು. ಆದರೆ ಭಾರತ ಪ್ರತಿ ಹಂತದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪಿಸಿಬಿ ಆರೋಪಿಸಿದೆ.
ಎಲ್ಲಾ ರೀತಿಯ ಭದ್ರತೆಯ ಭರವಸೆ ನೀಡಿದರೂ ಪಾಕಿಸ್ತಾನ ಪ್ರವಾಸಕ್ಕೆ ಭಾರತ ಒಪ್ಪಿರಲಿಲ್ಲ. ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಗೊಂಡಿತ್ತು. ಉದ್ಘಾಟನಾ ಸಮಾರಂಭಕ್ಕೆ ನಾಯಕ ರೋಹಿತ್ ಶರ್ಮಾ ಅವರನ್ನು ಕಳುಹಿಸಲು ಕೂಡ ಬಿಸಿಸಿಐ ನಿರಾಕರಿಸಿತ್ತು. ಇದೀಗ ಜರ್ಸಿಯಲ್ಲಿ ಟೂರ್ನಿಯ ಆತಿಥೇಯ ದೇಶದ ಹೆಸರು ಹಾಕಿಸಲು ನಿರಾಕರಿಸಿದೆ.
ಭಾರತದ ಪಂದ್ಯಗಳು ದುಬೈನಲ್ಲಿ
ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡಲಿದೆ. ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.
19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ.