ಬೆಂಗಳೂರು: ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯ ಮಾದರಿಯು ಈಗ ಭಾರಿ ಜನಪ್ರಿಯವಾಗುತ್ತಿದೆ. ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ ಫೋನ್ ಇರುವುದು, ಥರ್ಡ್ ಪಾರ್ಟಿ ಅಗ್ರಿಗೇಟರ್ ಗಳ ಹೆಚ್ಚಳ, ಕನಿಷ್ಠ ಮೊತ್ತವನ್ನೂ ಹೂಡಿಕೆ ಮಾಡುವ ಅವಕಾಶಗಳು ಇರುವ ಕಾರಣ ಹೆಚ್ಚಿನ ಜನ ಮ್ಯೂಚುವಲ್ ಫಂಡ್ ಎಸ್ಐಪಿ ಮಾಡುತ್ತಾರೆ. ಹೂಡಿಕೆ ದೃಷ್ಟಿಯಿಂದ ಇದು ಸರಿಯಾದರೂ ಎಸ್ಐಪಿ ಮಾಡುವಾಗ ತುಂಬ ಜನ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ, ಇನ್ನುಮುಂದೆ ಎಸ್ಐಪಿ ಆಯ್ಕೆ ಮಾಡಿಕೊಳ್ಳುವಾಗ ಈ ಸಂಗತಿಗಳು ನೆನಪಿರಲಿ.
- ಒಂದೇ ಫಂಡ್ ಮೇಲೆ ಹೂಡಿಕೆ ಮಾಡುವುದು
ಹೂಡಿಕೆ ಮಾಡಬಹುದಾದ ಮೊತ್ತವನ್ನೂ ಒಂದೇ ಫಂಡ್ ನಲ್ಲಿ ಹಾಕುವುದು ಬಹುತೇಕ ಜನ ಮಾಡುವ ತಪ್ಪಾಗಿದೆ. ಉದಾಹರಣೆಗೆ, ಮಾಸಿಕ ಐದು ಸಾವಿರ ರೂಪಾಯಿಯನ್ನು ಎಸ್ಐಪಿ ಮಾಡುವುದಾದರೆ, ಅಷ್ಟೂ ಮೊತ್ತವನ್ನು ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ, ಇದನ್ನೇ ಎರಡು ಭಾಗಗಳಾಗಿ ವಿಂಗಡಿಸಿ, 2,500 ರೂಪಾಯಿಯನ್ನು ಈಕ್ವಿಟಿ, 2,500 ರೂಪಾಯಿಯನ್ನು ಈಕ್ವಿಟಿ ಪ್ಲಸ್ ಡೆಟ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದರಿಂದಾಗಿ ಒಂದು ಫಂಡ್ ನಷ್ಟ ಅನುಭವಿಸಿದರೂ, ಮತ್ತೊಂದರಲ್ಲಿ ಲಾಭ ಸಿಗುತ್ತದೆ. ಇದನ್ನೇ ಹೂಡಿಕೆಯ ಡೈವರ್ಸಿಫಿಕೇಷನ್ ಎನ್ನುತ್ತಾರೆ. - ಹಣಕಾಸು ಸ್ಥಿತಿ ಅವಲೋಕನ ಇರಲಿ
ಗೆಳೆಯರು ಹೇಳಿದರು ಎಂದೋ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ನೋಡಿಯೋ ತರಾತುರಿಯಲ್ಲಿ ಹಣ ಹೂಡಿಕೆ ಮಾಡುವವರು ಇದ್ದಾರೆ. ಆದರೆ, ನಮ್ಮ ಹಣಕಾಸು ಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ, ಮಾಸಿಕ ಆದಾಯ, ಖರ್ಚು ವೆಚ್ಚ, ತುರ್ತು ನಿಧಿಯನ್ನು ನೋಡಿಕೊಂಡು ನಿಯಮಿತ ಮೊತ್ತವನ್ನು ಹೂಡಿಕೆ ಮಾಡುವುದು ಉತ್ತಮ. ಇದರಿಂದ ದೀರ್ಘ ಅವಧಿಗೆ ಹೂಡಿಕೆ ಮಾಡುವುದು, ಹೆಚ್ಚು ರಿಟರ್ನ್ಸ್ ಪಡೆಯಲು ಸಾಧ್ಯವಾಗುತ್ತದೆ. - ಎಸ್ಐಪಿ ಶಾರ್ಟ್ ಟರ್ಮ್ ಅಲ್ಲ
ಮ್ಯೂಚುವಲ್ ಫಂಡ್ ಹೂಡಿಕೆ ಎಂಬುದು ಶಾರ್ಟ್ ಟರ್ಮ್ ಹೂಡಿಕೆಯ ವಿಧಾನ ಅಲ್ಲ. ನಿಯಮಿತ ಮೊತ್ತವನ್ನು ಸುದೀರ್ಘ ಅವಧಿಗೆ ಹೂಡಿಕೆ ಮಾಡುವುದರಿಂದ ಹೆಚ್ಚು ರಿಟರ್ನ್ಸ್ ಲಭಿಸುತ್ತದೆ. ಪ್ರತಿ ತಿಂಗಳು 2 ಸಾವಿರ ರೂ. ಎಸ್ಐಪಿ ಹೂಡಿಕೆ ಮಾಡುವವರು, ಆರು ತಿಂಗಳ ನಂತರ 100 ರೂಪಾಯಿ ನಷ್ಟವಾದರೂ ಅಲ್ಲಿಗೆ ಹೂಡಿಕೆಯನ್ನು ಸ್ಥಗಿತಗೊಳಿಸುತ್ತಾರೆ. ಎಸ್ಐಪಿ ಎಂಬುದು ಕನಿಷ್ಠ ಐದು ವರ್ಷಗಳ ಹೂಡಿಕೆ ಎಂಬುದು ನೆನಪಿರಲಿ. - ತಜ್ಞರ ಸಲಹೆ ಪಡೆಯದಿರುವುದು
ಮ್ಯೂಚುವಲ್ ಫಂಡ್ ಎಸ್ಐಪಿ ಎಂಬುದು ದೀರ್ಘ ಅವಧಿಯ ಹೂಡಿಕೆಯಾದ ಕಾರಣ, ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದಾದರೂ ತಜ್ಞರ ಸಲಹೆಗಳನ್ನು ಪಡೆಯುವುದು ಮುಖ್ಯವಾಗುತ್ತದೆ. ಎಸ್ಐಪಿಯಲ್ಲೇ ಡೆಟ್, ಈಕ್ವಿಟಿ ಸೇರಿ ಹಲವು ವಿಧಗಳು ಇರುತ್ತವೆ. ಹೆಚ್ಚು ರಿಟರ್ನ್ಸ್ ಕೊಡುವ ಫಂಡ್ ಗಳೂ ಇರುತ್ತವೆ. ಇವುಗಳ ಕುರಿತು ಅಧ್ಯಯನ ಮಾಡಿ, ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು. - ಕಮಿಷನ್, ಎಕ್ಸಿಟ್ ಲೋಡ್ ಪರಿಶೀಲಿಸಿ
ಫೋನ್ ಪೇ, ಜೆರೋದಾ ಸೇರಿ ಹಲವು ಥರ್ಡ್ ಪಾರ್ಟಿ ಅಗ್ರಿಗೇಟರ್ ಗಳ ಮೂಲಕ ಎಸ್ಐಪಿ ಖರೀದಿಸುವಾಗ ಆ ಅಗ್ರಿಗೇಟರ್ ಗಳ ಕಮಿಷನ್, ಎಕ್ಸಿಟ್ ಲೋಡ್ ಬಗ್ಗೆ ಪರಿಶೀಲಿಸಬೇಕು. ಕೆಲವು ಕಂಪನಿಗಳು ಹೆಚ್ಚು ಕಮಿಷನ್ ಪಡೆಯುತ್ತವೆ. ಇನ್ನೂ ಕೆಲವು ಕಂಪನಿಗಳ ಎಕ್ಸಿಟ್ ಲೋಡ್ ಜಾಸ್ತಿ ಇರುತ್ತದೆ. ಒಂದು ಪರ್ಸೆಂಟ್ ಕಮಿಷನ್ ಎಂದರೂ, 5 ವರ್ಷಗಳ ಬಳಿಕ ವಿತ್ ಡ್ರಾ ಮಾಡಿದಾಗ ಹೆಚ್ಚು ಹಣ ಪೋಲಾಗುತ್ತದೆ.