ಪಲ್ಲೆಕೆಲೆ/ಇಸ್ಲಾಮಾಬಾದ್: ಟಿ20 ವಿಶ್ವಕಪ್ 2026ರ ಸೆಮಿಫೈನಲ್ ರೇಸ್‌ನಿಂದ ಪಾಕಿಸ್ತಾನ ಹೊರಬಿದ್ದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರು ಸಲ್ಮಾನ್ ಅಲಿ ಅಘಾ ನೇತೃತ್ವದ ತಂಡವನ್ನು ಕಟುವಾಗಿ ಟೀಕಿಸಿದ್ದು, “ಇದನ್ನು ಪಾಕಿಸ್ತಾನ ತಂಡ ಎಂದು ಕರೆಯಬೇಡಿ, ಇದು ಕೋಚ್ ಮೈಕ್ ಹೆಸನ್ ಅವರ ಫ್ರಾಂಚೈಸಿ ತಂಡದಂತಿದೆ” ಎಂದು ಹರಿಹಾಯ್ದಿದ್ದಾರೆ.
ಫೆಬ್ರವರಿ 28 ರಂದು ನಡೆದ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 5 ರನ್‌ಗಳ ಜಯ ಸಾಧಿಸಿತಾದರೂ, ನೆಟ್ ರನ್ ರೇಟ್ (NRR) ಕೊರತೆಯಿಂದಾಗಿ ಸೆಮಿಫೈನಲ್ ಅವಕಾಶ ವಂಚಿತವಾಯಿತು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬಸಿತ್ ಅಲಿ, “ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ 176 ರನ್‌ಗಳ ಭರ್ಜರಿ ಆರಂಭ ನೀಡಿದ್ದರು. ಆದರೆ ಕೊನೆಯ 5 ಓವರ್‌ಗಳಲ್ಲಿ ಪಾಕಿಸ್ತಾನ ಕೇವಲ 49 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತು. ಅಲ್ಲಿ 36 ರನ್‌ಗಳ ಬದಲು 65 ರನ್ ಗಳಿಸಿದ್ದರೆ ಪಾಕಿಸ್ತಾನ ಇಂದು ಸೆಮಿಫೈನಲ್‌ನಲ್ಲಿ ಇರುತ್ತಿತ್ತು” ಎಂದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.
ಬಾಬರ್ ಅಜಮ್ ಮತ್ತು ಮೈಕ್ ಹೆಸನ್ ವಿರುದ್ಧ ವಾಗ್ದಾಳಿ
ಹೆಡ್ ಕೋಚ್ ಮೈಕ್ ಹೆಸನ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ ಬಸಿತ್ ಅಲಿ, “ಬಾಬರ್ ಅಜಮ್ ಅವರಿಗೆ ಪವರ್‌ಪ್ಲೇನಲ್ಲಿ ಆಡುವ ವೇಗವಿಲ್ಲ ಎಂದು ಕೋಚ್ ಬಹಿರಂಗವಾಗಿ ಹೇಳುತ್ತಾರೆ. ಹಾಗಿದ್ದ ಮೇಲೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾದರೂ ಯಾಕೆ? ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಿದ್ದು ತಪ್ಪು ನಿರ್ಧಾರ. ತಂಡದ ಉದ್ದೇಶಗಳೇ ಸರಿಯಿರಲಿಲ್ಲ” ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಭಾರತದ ವಿರುದ್ಧ ಉತ್ತಮವಾಗಿ ಆಡಿದ್ದ ಉಸ್ಮಾನ್ ಖಾನ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಕ್ಕೆ ತಳ್ಳಿದ್ದನ್ನು ಮತ್ತು ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಪಂದ್ಯದಿಂದ ಹೊರಗಿಟ್ಟಿದ್ದನ್ನು ಬಸಿತ್ ಅಲಿ ‘ಪುನರಾವರ್ತಿತ ತಪ್ಪುಗಳು’ ಎಂದು ಕರೆದಿದ್ದಾರೆ.
“ಸರ್ಜರಿಯ ಅಗತ್ಯವಿದೆ”
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷರಿಗೆ ಸಲಹೆ ನೀಡಿರುವ ಬಸಿತ್ ಅಲಿ, “ಪಾಕಿಸ್ತಾನ ಕ್ರಿಕೆಟ್‌ಗೆ ಈಗ ದೊಡ್ಡ ಶಸ್ತ್ರಚಿಕಿತ್ಸೆಯ (Surgery) ಅಗತ್ಯವಿದೆ. ಮಂಡಳಿಗೆ ಕ್ರಿಕೆಟ್ ಜ್ಞಾನವಿರುವ ಉತ್ತಮ ವ್ಯಕ್ತಿಗಳನ್ನು ತನ್ನಿ. ನಮ್ಮ ವ್ಯವಸ್ಥೆ ಬಲಗೊಳ್ಳದಿದ್ದರೆ ಕ್ರಿಕೆಟ್ ಸುಧಾರಿಸಲು ಸಾಧ್ಯವಿಲ್ಲ. ಈಗಿನ ತಂಡವು ರಾಷ್ಟ್ರೀಯ ತಂಡದಂತೆ ಕಾಣುತ್ತಿಲ್ಲ, ಒಂದು ಕ್ಲಬ್ ತಂಡದಂತೆ ಕಾಣುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾದಾಬ್ ಖಾನ್ ಅವರನ್ನು ಭವಿಷ್ಯದ ನಾಯಕ ಎಂದು ಬೆಂಬಲಿಸುತ್ತಿರುವ ಮಾಜಿ ಆಟಗಾರರ ವಿರುದ್ಧವೂ ಬಸಿತ್ ಅಲಿ “ಸ್ವಲ್ಪ ನಾಚಿಕೆ ಪಟ್ಟುಕೊಳ್ಳಿ, ದೇಶಕ್ಕೆ ಸರಿಯಾದ ಸಲಹೆ ನೀಡಿ” ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಲಸಿತ್ ಮಾಲಿಂಗ – ದಸುನ್ ಶನಕ ನಡುವೆ ಬೀದಿ ಜಗಳ! ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್



















