ರಾಜ್ಯದಲ್ಲಿ ಉಪ ಚುನಾವಣೆಯ ಕಣ ರಂಗೇರಿದೆ. ಹೀಗಾಗಿ ಆರೋಪ- ಪ್ರತ್ಯಾರೋಪಗಳು ಸಹಜವಾಗಿವೆ. ಈ ಮಧ್ಯೆ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಅಳುವ ಗಂಡಸನ್ನು ನಂಬಬಾರದು ಎಂದು ಗಾದೆ ಇದೆ. ಹೆಚ್‌ಡಿ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ಅವರನ್ನು ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತದಾ? ಕೆರೆಗಳು ತುಂಬುತ್ತವಾ? ರೈತರ ಜಮೀನಿಗೆ ನೀರು ಹರಿಯುತ್ತಾ? ಕ್ಷೇತ್ರದ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿ, ಲೇವಡಿ ಮಾಡಿದ್ದಾರೆ.
ನಮಗೆ ಯಾರೂ ರಾಜಕೀಯಕ್ಕೆ ಬನ್ನಿ ಎಂದು ಕರೆದಿಲ್ಲ. ಜನಸೇವೆ ಮಾಡಬೇಕು ಎಂದು ನಾವೇ ಬಂದಿದ್ದೇವೆ. ಬಂದ ಮೇಲೆ ಕೆಲಸ ಮಾಡಬೇಕು. ಕಣ್ಣೀರು ಹಾಕಿದರೆ ಜನರ ಕೆಲಸ ಆಗಲ್ಲ ಎಂದಿದ್ದಾರೆ.
ನಮ್ಮ ಸರ್ಕಾರದ ಶಕ್ತಿ ಯೋಜನೆಯನ್ನು ಮೆಚ್ಚಿಕೊಂಡು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಪತ್ರ ಬರೆದಿದ್ದಾರೆ. ಈ ಬಾರಿ ಹಾಸನಾಂಬೆ ಜಾತ್ರೆಯಲ್ಲಿ 21 ಲಕ್ಷ ಮಹಿಳೆಯರು ಹೋಗಿದ್ದಾರೆ. ಇದು ಕೂಡ ದಾಖಲೆಯಾಗಿದೆ. ಇದಕ್ಕೆ ಶಕ್ತಿ ಯೋಜನೆಯೇ ಕಾರಣ ಎಂದು ಹೇಳಿದ್ದಾರೆ.
ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು, ಜನ ಮರುಳಾಗಿ ಮತ ಹಾಕುತ್ತಾರೆ ಎಂದು ನಿಖಿಲ್‌ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯದಲ್ಲಿ ಇಡೀ ಫ್ಯಾಮಿಲಿ ಕಣ್ಣೀರು ಹಾಕುತ್ತಿದೆ ಎಂದು ಗುಡುಗಿದ್ದಾರೆ.