ವಾಷಿಂಗ್ಟನ್: ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಬಂಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಾವೇ ತೈಲ ಸಮೃದ್ಧ ವೆನೆಜುವೆಲಾದ ‘ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷ ಎಂಬ ಬಿರುದಿನ ಜೊತೆಗೆ ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂಬ ಪಟ್ಟವನ್ನೂ ಸೇರಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕ ಸೇನೆಯು ವೆನೆಜುವೆಲಾದ ಮೇಲೆ ಬೃಹತ್ ಮಟ್ಟದ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯ ವೇಳೆ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಸೆರೆಹಿಡಿಯಲಾಗಿತ್ತು. ಇವರಿಬ್ಬರನ್ನೂ ಪ್ರಸ್ತುತ ಅಮೆರಿಕದ ನ್ಯೂಯಾರ್ಕ್‌ಗೆ ಕರೆತರಲಾಗಿದ್ದು, ಮಾದಕ ದ್ರವ್ಯ ಭಯೋತ್ಪಾದನೆಗೆ ಪಿತೂರಿಯ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ. ಈ ವಿದ್ಯಮಾನದ ನಂತರ ವೆನೆಜುವೆಲಾದಲ್ಲಿ ಉಂಟಾಗಿರುವ ರಾಜಕೀಯ ಶೂನ್ಯತೆಯನ್ನು ತುಂಬಲು ಅಮೆರಿಕ ಮುಂದಾಗಿದೆ ಎಂಬುದು ಟ್ರಂಪ್ ಅವರ ಈ ಪೋಸ್ಟ್‌ನಿಂದ ಸ್ಪಷ್ಟವಾಗುತ್ತಿದೆ.
ತೈಲ ಒಪ್ಪಂದ ಮತ್ತು ಆಡಳಿತದ ಮೇಲ್ವಿಚಾರಣೆ
ವೆನೆಜುವೆಲಾದಲ್ಲಿ ಸುರಕ್ಷಿತ ಮತ್ತು ಸರಿಯಾದ ಆಡಳಿತ ವ್ಯವಸ್ಥೆ ಜಾರಿಗೆ ಬರುವವರೆಗೆ ಅಮೆರಿಕವೇ ಅಲ್ಲಿನ ಆಡಳಿತದ ಮೇಲ್ವಿಚಾರಣೆ ನಡೆಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ವೆನೆಜುವೆಲಾದ ಮಧ್ಯಂತರ ಸರ್ಕಾರವು ಸುಮಾರು 30 ರಿಂದ 50 ಮಿಲಿಯನ್ ಬ್ಯಾರೆಲ್ ಉತ್ತಮ ಗುಣಮಟ್ಟದ ತೈಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ತೈಲವನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿ, ಅದರಿಂದ ಬರುವ ಲಾಭವನ್ನು ಅಮೆರಿಕದ ಆಡಳಿತವು ಉಭಯ ದೇಶಗಳ ಕ್ಷೇಯೋಭಿವೃದ್ಧಿಗೆ ಬಳಸಲಿದೆ ಎಂದು ಅವರು ವಿವರಿಸಿದ್ದಾರೆ. ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರಿಗೆ ಈ ಯೋಜನೆಯನ್ನು ತಕ್ಷಣವೇ ಜಾರಿಗೆ ತರುವಂತೆ ಸೂಚಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಕ್ಯೂಬಾಗೂ ಎಚ್ಚರಿಕೆ
ವೆನೆಜುವೆಲಾದ ಅಧಿಕಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಮುನ್ಸೂಚನೆ ನೀಡಿರುವ ಟ್ರಂಪ್, ನೆರೆ ರಾಷ್ಟ್ರವಾದ ಕ್ಯೂಬಾಕ್ಕೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದಿಂದ ಕ್ಯೂಬಾಕ್ಕೆ ರವಾನೆಯಾಗುತ್ತಿದ್ದ ತೈಲ ಪೂರೈಕೆ ಮತ್ತು ಆರ್ಥಿಕ ನೆರವನ್ನು ಸಂಪೂರ್ಣವಾಗಿ ಕಡಿತಗೊಳಿಸುವುದಾಗಿ ಅವರು ಘೋಷಿಸಿದ್ದಾರೆ. ಇದು ದಕ್ಷಿಣ ಅಮೆರಿಕಾ ಭಾಗದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಸೂಚಿಸುತ್ತಿದೆ.
ಟ್ರಂಪ್ ಈ ರೀತಿ ಘೋಷಿಸಿಕೊಂಡಿದ್ದರೂ, ಅಧಿಕೃತ ದಾಖಲೆಗಳಲ್ಲಿ ಅವರು ವೆನೆಜುವೆಲಾದ ಅಧ್ಯಕ್ಷ ಎಂದು ದಾಖಲಾಗಿಲ್ಲ. ವಾಸ್ತವವಾಗಿ, ಕಳೆದ ವಾರ ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಅಲ್ಲಿನ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಟ್ರಂಪ್ ಅವರ ಈ ಘೋಷಣೆಯು ವೆನೆಜುವೆಲಾದ ಆಂತರಿಕ ಆಡಳಿತದಲ್ಲಿ ಅಮೆರಿಕದ ನೇರ ಹಸ್ತಕ್ಷೇಪ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಗೆ ನೂತನ ಕಚೇರಿ | ಈ ತಿಂಗಳಲ್ಲೇ ‘ಸೇವಾ ತೀರ್ಥ’ಕ್ಕೆ ಶಿಫ್ಟ್



















