ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಧನಂಜಯ್ ಮತ್ತು ವೈದ್ಯೆ ಧನ್ಯಾತಾ ಪರಸ್ಪರ ಉಂಗುರ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಮಂತ್ರಣ ಪತ್ರಿಕೆಯನ್ನು ಕ್ರಿಯಾಶೀಲವಾಗಿ ಮಾಡುವ ಜೊತೆಗೆ ಅಲ್ಲಿಯೂ ಕನ್ನಡತನ, ಸರಳತೆ ಹಾಗೂ ಮಧ್ಯಮವರ್ಗತನವನ್ನು ಡಾಲಿ ಹಾಗೂ ಧನ್ಯತಾ ಮೆರೆದಿದ್ದಾರೆ.
ಡಾಲಿ ಧನಂಜಯ್, ಸರಳವಾದ ಹಾಗೂ ಸುಂದರವಾದ ಮತ್ತು ಬಹಳ ಆಪ್ತ ಎನಿಸುವಂತಹ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ. ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಿದ್ದು, ಆಮಂತ್ರಣ ಪತ್ರಿಕೆಯ ಒಳಗೆ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳನ್ನು ಅದರಲ್ಲಿ ಬರೆಯಲಾಗಿದೆ.
‘ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು.
ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಬರೆಹ ಸಹ ಕೈಬರಹದ ಫಾಂಟ್ನಲ್ಲಿಯೇ ಬರೆದುಕೊಂಡಿದ್ದಾರೆ.
ಈ ಜೋಡಿಯ ವಿವಾಹ ಕಾರ್ಯಕ್ರಮ ಮೈಸೂರು ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 16ರಂದು ನಡೆಯಲಿದೆ.