ಬೆಂಗಳೂರು: ಸ್ಯಾಂಡಲ್ ವುಡ್ ನಟ, ಡಾಲಿ ಧನಂಜಯ ಹಾಗೂ ಡಾ.ಧನ್ಯತಾ ಅವರ ವಿವಾಹವು ಇದೇ ಫೆಬ್ರವರಿ 16ರಂದು ನಡೆಯಲಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, ಭಾರತೀಯ ಅಂಚೆಯಿಂದ ಡಾಲಿ ಧನಂಜಯ ಅವರಿಗೆ ವಿಶೇಷ ಉಡುಗೊರೆ ಲಭಿಸಿದೆ. ಧನಂಜಯ ಹಾಗೂ ಧನ್ಯತಾ ಅವರ ಫೋಟೊ ಇರುವ ವಿಶೇಷ ಸ್ಟ್ಯಾಂಪ್ ಒಂದನ್ನು ತಯಾರಿಸಿರುವ ಅಂಚೆ ಇಲಾಖೆಯು, ನಟನಿಗೆ ನೀಡುವ ಮೂಲಕ ವಿವಾಹಕ್ಕೆ ಶುಭಕೋರಿದೆ.
ಅಂಚೆ ಇಲಾಖೆ ನೀಡಿದ ವಿಶೇಷ ಅಂಚೆ ಚೀಟಿಯ ಫೋಟೊಗಳನ್ನು ಡಾಲಿ ಧನಂಜಯ ಅವರು ಹಂಚಿಕೊಂಡಿದ್ದಾರೆ. “ಪ್ರೀತಿಯ ಇಂಡಿಯಾ ಪೋಸ್ಟ್, ನಿಮ್ಮ ಪ್ರೀತಿಗೆ ಶರಣು, ಧನ್ಯವಾದಗಳು. ನೀವು ನೀಡಿದ ಉಡುಗೊರೆಗೆಯಿಂದ ನಮಗೆ ಖುಷಿಯಾಗಿದೆ. ಇನ್ ಲ್ಯಾಂಡ್ ಲೆಟರ್ ಮೂಲಕ ಆಹ್ವಾನ ನೀಡಿರುವುದು ನಿಮ್ಮ ಗಮನಕ್ಕೆ ಬಂದಿರುವುದು ಸಂತಸ ತಂದಿದೆ” ಎಂದು ಧನಂಜಯ ಅವರು ಪೋಸ್ಟ್ ಮಾಡಿದ್ದಾರೆ.
ಡಾಲಿ ಧನಂಜಯ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿ ಮುದ್ರಿಸಿದ್ದರು. ಪ್ರತಿಯೊಬ್ಬ ಗಣ್ಯರಿಗೂ ಅವರು ಅದೇ ಆಮಂತ್ರಣ ಪತ್ರವನ್ನು ನೀಡಿದ್ದರು. ಇದಾದ ಬಳಿಕ ಪೋಸ್ಟ್ ಆಫೀಸ್ ಗಳಲ್ಲಿ ಇನ್ ಲ್ಯಾಂಡ್ ಲೆಟರ್ ಗಳಿಗೆ ಬೇಡಿಕೆಯುಂಟಾಗಿದೆ. ಹಾಗಾಗಿ, ಮೈಸೂರು ಅಂಚೆ ಇಲಾಖೆ ಅಧಿಕಾರಿಗಳು ಧನಂಜಯ ಅವರಿಗೆ ವಿಶೇಷ ಸ್ಟ್ಯಾಪ್ ನ ಉಡುಗೊರೆ ನೀಡಿದ್ದಾರೆ.

ನಟ ಡಾಲಿ ಧನಂಜಯ್ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಮನೆ ದೇವರಾದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ನಟ ಭಾಗಿಯಾಗಿ, ಮನೆಗೆ ಉತ್ಸವ ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ, ಕೆಂಡ ಹಾಯುವ ಸಂಪ್ರದಾಯವನ್ನು ಡಾಲಿ ಪೂರೈಸಿದ್ದಾರೆ. ಫೆಬ್ರವರಿ 16ರಂದು ಡಾಲಿ ಹಾಗೂ ಡಾಕ್ಟರ್ ಹಸೆಮಣೆ ಏರಲಿದ್ದಾರೆ.