ಲಕ್ನೋ: ಉತ್ತರಪ್ರದೇಶದ ಲಲಿತ್‌ಪುರದಲ್ಲಿ ನವಜಾತ ಶಿಶುವೊಂದರ ತಲೆಯನ್ನು ಬೀದಿನಾಯಿಗಳು ಕಚ್ಚಿ ತಿನ್ನುತ್ತಿರುವ ಮನಕಲಕುವ ವಿಡಿಯೋವೊಂದು ಬಹಿರಂಗವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಲಲಿತ್‌ಪುರ ವೈದ್ಯಕೀಯ ಕಾಲೇಜಿನ ಹೊರಗೆ ಶಿಶುವಿನ ತಲೆಯನ್ನು ನಾಯಿಗಳು ಕಚ್ಚಿ ಹರಿಯುತ್ತಿರುವುದನ್ನು ನೋಡಿದ ಜನರು, ನಾಯಿಗಳನ್ನು ಓಡಿಸುವಷ್ಟರಲ್ಲಿ ಅವುಗಳು ತಲೆಯನ್ನು ಪೂರ್ತಿ ತಿಂದು ಮುಗಿಸಿದ್ದವು. ಆಸ್ಪತ್ರೆಯ ಆಡಳಿತವು ಜವಾಬ್ದಾರಿಯಿಂದ ನುಣುಚಿಕೊಂಡಿದ್ದು, ಶಿಶುವಿನ ಪೋಷಕರ ವಿರುದ್ಧ ಆರೋಪ ಹೊರಿಸಿದ್ದಾರೆ.
ಫೆಬ್ರವರಿ 9ರ ಭಾನುವಾರ ಲಲಿತ್‌ಪುರ ವೈದ್ಯಕೀಯ ಕಾಲೇಜಿನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿತ್ತು. ಮಗುವು ಸಾಮಾನ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದು, ಅನಾರೋಗ್ಯವೂ ಬಾಧಿಸಿದ ಕಾರಣ ಅದನ್ನು ವಿಶೇಷ ನವಜಾತ ಆರೈಕೆ ವಿಭಾಗಕ್ಕೆ ದಾಖಲಿಸಲಾಗಿತ್ತು.
“ಮಗುವಿಗೆ ಜನ್ಮಜಾತ ಅನಾರೋಗ್ಯವಿತ್ತು. ತಲೆಯು ಪೂರ್ಣಪ್ರಮಾಣದಲ್ಲಿ ಬೆಳೆದಿರಲಿಲ್ಲ. ಬೆನ್ನುಮೂಳೆಯೂ ಇರಲಿಲ್ಲ, 1.3 ಕೆ.ಜಿ. ತೂಕವಷ್ಟೇ ಇತ್ತು. ಆದರೆ ಶಿಶುವು ಜೀವಂತವಾಗಿದ್ದು ಮತ್ತು ನಿಮಿಷಕ್ಕೆ 80ರಂದೆ ಹೃದಯ ಬಡಿತ ಇತ್ತು. ಈ ಹಿನ್ನೆಲೆಯಲ್ಲಿ ನಾವು ಶಿಶುವನ್ನು ವಿಶೇಷ ಆರೈಕೆ ವಿಭಾಗಕ್ಕೆ ದಾಖಲಿಸಿದ್ದೆವು” ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಮೀನಾಕ್ಷಿ ಸಿಂಗ್ ಹೇಳಿದ್ದಾರೆ. ಸಂಜೆ ವೇಳೆ ಶಿಶು ಮೃತಪಟ್ಟಿದ್ದು, ನಾವು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೆವು. ಮಗುವಿನ ಚಿಕ್ಕಮ್ಮನೇ ನಮ್ಮಿಂದ ಮೃತದೇಹವನ್ನು ಪಡೆದಿದ್ದರು. ಅದಕ್ಕೆ ನಾವು ಸಹಿಯನ್ನೂ ಪಡೆದಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯ ಸಿಬ್ಬಂದಿಗೆ ನಾಯಿ ದಾಳಿಯ ವಿಚಾರ ತಿಳಿಯಿತು. ಹೋಗಿ ನೋಡಿದಾಗ, ತಲೆಯೇ ಇಲ್ಲದ ಶಿಶುವಿನ ದೇಹ ಪತ್ತೆಯಾಗಿತ್ತು ಎಂದಿರುವ ಆಸ್ಪತ್ರೆ ಸಿಬ್ಬಂದಿ, ಮಗುವಿನ ಹೆತ್ತವರೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೊರಗೆ ಬಿಸಾಕಿ ಹೋಗಿರಬಹುದು ಎಂದು ಆರೋಪಿಸಿದ್ದಾರೆ.
ಘಟನೆ ಸಂಬಂಧ ತನಿಖೆಗಾಗಿ ಲಲಿತ್ ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ನಾಲ್ವರು ವೈದ್ಯರ ಸಮಿತಿ ರಚಿಸಿದ್ದು, ಶಿಶುವಿನ ಮರಣಕ್ಕೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಿ 24 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಹಿಂದೆಯೂ ಈ ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿತ್ತು.