ನಾಯಿಯೊಂದು ತಮ್ಮ ಮಾಲೀಕರ ಮನೆಗೆ ಎಂಟ್ರಿ ಕೊಡಲು ಮುಂದಾಗಿದ್ದ ವಿಷ ಸರ್ಪವನ್ನು ಕೊಂದು, ತಾನೂ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ತನ್ನ ಮಾಲೀಕನ ತೋಟದ ಮನೆಯತ್ತ ದಾವಿಸುತ್ತಿದ್ದ ನಾಗರಹಾವೊಂದನ್ನು ಕಂಡ ನಾಯಿ, ಮಾಲೀಕರಿಗೆ ತೊಂದರೆ ಮಾಡಬಹುದು ಎಂದು ಭಾವಿಸಿ, ಹಾವಿನೊಂದಿಗೆ ಹೋರಾಟ ನಡೆಸಿ, ಅದನ್ನು ಕೊಂದು ತಾನೂ ಮಾಲೀಕರಿಗಾಗಿ ಪ್ರಾಣ ತೆತ್ತಿದೆ. ಈ ಹೃದಯ ವಿದ್ರಾವಕ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯದ ಚೌಡಳ್ಳಿ ಕ್ರಾಸ್ ನಲ್ಲಿ ನಡೆದಿದೆ.
ಗ್ರಾಮದ ನಾಗರಾಜೇಗೌಡ ಎಂಬುವರು ತೋಟದಲ್ಲಿ ಈ ಘಟನೆ ನಡೆದಿದೆ.ನಾಗರಾಜೇಗೌಡ ಟು ಎಕರೆ ತೋಟ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಅಚ್ಚುಕಟ್ಟಾದ ತೋಟದಲ್ಲಿ ಅನೇಕ ರೀತಿಯ ಕೃಷಿ ಮಾಡಲಾಗುತ್ತಿದೆ. ಅವರ ಮಗ ಜಯಂತ್ ಪ್ರೀತಿಯಿಂದ ಎರಡು ಜಾತಿ ನಾಯಿಗಳನ್ನು ಸಾಕಿಕೊಂಡಿದ್ದರು. ಒಂದು ಪಿಟ್ ಬುಲ್ ಅದರ ಹೆಸರು ಭೀಮಾ.. ಮತ್ತೊಂದು ಡಾಬರ್‌ಮನ್, ಇದರ ಹೆಸರು ಮಿಂಚು. ಮಂಗಳವಾರ ಬೆಳಗ್ಗೆ ತೋಟದ ಮಾಲೀಕರ ಮೊಮ್ಮಕ್ಕಳು ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ, ದೊಡ್ಡ ಗಾತ್ರದ ನಾಗರಹಾವೊಂದು ಮಕ್ಕಳು ಆಟವಾಡುತ್ತಿದ್ದ ಕಡೆಗೆ ಬಂದು ಬಿಟ್ಟಿದೆ. ಇದನ್ನು ಗಮನಿಸಿದ ಭೀಮಾ ಮತ್ತು ಮಿಂಚು ವಿಷ ಸರ್ಪದ ಜೊತೆ ಕಾದಾಟಕ್ಕೆ ಇಳಿದಿವೆ.. ಮೊದಲು ಅಟ್ಯಾಕ್ ಮಾಡಿದ ಪಿಟ್‌ಬುಲ್ ಭೀಮಾ ಹಾವು ಕೊನೆಯುಸಿರೆಳೆಯುವ ವರೆಗೆ ಅದರ ಜೊತೆ ಸೆಣೆಸಾಡಿದೆ.
ಈ ಘಟನೆ ಕಂಡ ತೋಟದ ಕೆಲಸಗಾರರು ಕಾಳಗವನ್ನು ನಿಲ್ಲಿಸುವಂತೆ ಎಷ್ಟೇ ಕೂಗಡಿದ್ರೂ ಬಿಡದ ಸಾಕು ನಾಯಿಗಳು ಕೊನೆವರೆಗೂ ಹೋರಾಡಿ ಕಾಳಗದಲ್ಲಿ ನಾಗರಹಾವನ್ನ ಕೊಂದು ಹಾಕಿವೆ. ಅಲ್ಲದೇ ಕಾಳಗದಲ್ಲಿ ಪಿಟ್‌ಬುಲ್ ಭೀಮಾ ಮುಖಕ್ಕೆ ವಿಷ ಸರ್ಪ ಕಚ್ಚಿದ್ದು ಗಮನಿಸದ ಪಿಟ್‌ಬುಲ್ ವಿಷವೇರಿ ಪ್ರಾಣ ಬಿಟ್ಟಿದೆ. ಈ ಎಲ್ಲಾ ದೃಷ್ಯಗಳು ತೋಟದ ಕೆಲಸಗಾರನ ಮೊಬೈಲ್‌ನಲ್ಲಿ ಸೆರೆಯಾಗಿವೆ. ಮಾಲೀಕನಿಗಾಗಿ ನಿಯತ್ತು ಮೆರೆದ ಭೀಮನ ಸಾಹಸ ಕಂಡು ಈಗ ಜನರು ಕಣ್ಣೀರು ಹಾಕುತ್ತಿದ್ದಾರೆ.