ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಅತ್ಯಾಚಾರ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಮಹಿಳಾ ವೈದ್ಯೆಯ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ವೈದ್ಯಕೀಯ ವರದಿಗಳನ್ನು ತಿರುಚುವಂತೆ ಕೇವಲ ಪೊಲೀಸರಿಂದ ಮಾತ್ರವಲ್ಲ, ಓರ್ವ ಸಂಸದರಿಂದಲೂ ವೈದ್ಯೆಯ ಮೇಲೆ ತೀವ್ರ ಒತ್ತಡವಿತ್ತು ಎಂಬ ಆಘಾತಕಾರಿ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಅಸಹಜ ಸಾವುಗಳ ಮರಣೋತ್ತರ ಪರೀಕ್ಷಾ ವರದಿಗಳನ್ನು ಬದಲಾಯಿಸುವಂತೆ ಮತ್ತು ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ ವರದಿಗಳನ್ನು ಮಾರ್ಪಡಿಸುವಂತೆ ಪೊಲೀಸರು ತಮ್ಮ ಸೋದರಿಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ವೈದ್ಯೆಯ ಸಂಬಂಧಿಕರೊಬ್ಬರು ಈ ಮೊದಲೇ ಆರೋಪಿಸಿದ್ದರು.
ಮೂಲಗಳ ಪ್ರಕಾರ, ಆರೋಪಿಯೊಬ್ಬನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ, ಆತ ಆರೋಗ್ಯವಾಗಿದ್ದರೂ ವೈದ್ಯೆ ಆತನನ್ನು “ಅನರ್ಹ” ಎಂದು ಘೋಷಿಸಿ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿದ್ದರು. ಇಂತಹ ಮೂರ್ನಾಲ್ಕು ಘಟನೆಗಳ ನಂತರ ಪೊಲೀಸರು ಜಿಲ್ಲಾ ವೈದ್ಯಕೀಯ ಮಂಡಳಿಗೆ ದೂರು ನೀಡಿದ್ದರು. ಮಂಡಳಿಯು ವೈದ್ಯೆಯಿಂದ ಸ್ಪಷ್ಟೀಕರಣ ಕೇಳಿದಾಗ, ಅವರು ಸಂಸದರೊಬ್ಬರು ಕರೆ ಮಾಡಿ ಸುಳ್ಳು ವರದಿ ನೀಡಲು ಒತ್ತಡ ಹೇರಿದ್ದಾಗಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಆದರೆ, ಆ ಉತ್ತರದಲ್ಲಿ ಸಂಸದರ ಹೆಸರನ್ನು ಉಲ್ಲೇಖಿಸಿರಲಿಲ್ಲ.
“ಸಂಸದರ ಇಬ್ಬರು ಆಪ್ತ ಸಹಾಯಕರು ಆಸ್ಪತ್ರೆಗೆ ಬಂದು ನನ್ನೊಂದಿಗೆ ನಿಂದನಾರ್ಹ ಭಾಷೆಯಲ್ಲಿ ಮಾತನಾಡಿದರು. ‘ಸಂಸದರು ಕೋಪಗೊಂಡಿದ್ದಾರೆ’ ಎಂದು ಹೇಳಿ ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಡ ಹೇರಿದರು. ನಾನು ನಿಯಮಗಳ ಪ್ರಕಾರವೇ ಕ್ರಮ ಕೈಗೊಳ್ಳುವುದಾಗಿ ಹೇಳಿದಾಗ, ‘ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು,” ಎಂದು ವೈದ್ಯೆ ತಮ್ಮ ಉತ್ತರದಲ್ಲಿ ವಿವರಿಸಿದ್ದರು.
ಅಂಗೈ ಮೇಲಿನ ಡೆತ್ ನೋಟ್
ಬೀಡ್ ಜಿಲ್ಲೆಯ 28 ವರ್ಷದ ವೈದ್ಯೆ ಫಾಲ್ತಾನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ರಾತ್ರಿ ಪಟ್ಟಣದ ಹೋಟೆಲ್ ಕೋಣೆಯಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಅಂಗೈ ಮೇಲೆ ಬರೆದಿದ್ದ ಡೆತ್ ನೋಟ್‌ನಲ್ಲಿ, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮತ್ತು ಟೆಕ್ಕಿಯೊಬ್ಬರು ಕಳೆದ ಐದು ತಿಂಗಳಿಂದ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ, ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬಡಾನೆ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದು, ಪುಣೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪ್ರಶಾಂತ್ ಬಂಕರ್ ಎಂಬಾತ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಅವರು ಉಲ್ಲೇಖಿಸಿದ್ದರು.
ಪ್ರಕರಣದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಖುದ್ದು ಮಧ್ಯಪ್ರವೇಶಿಸಿದ ನಂತರ, ಆರೋಪಿ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬಡಾನೆಯನ್ನು ಅಮಾನತುಗೊಳಿಸಲಾಗಿದೆ. ಆತ ಸದ್ಯ ತಲೆಮರೆಸಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಪ್ರಶಾಂತ್ ಬಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ



















