ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಕೆಂಪುಕೋಟೆ ಬಳಿ ನಿನ್ನೆ ಸಂಜೆ 9 ಮಂದಿಯನ್ನು ಬಲಿಪಡೆದಿರುವ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಶ್ಮೀರ ಮೂಲದ ಮೂವರು ವೈದ್ಯರಾದ ಅದೀಲ್ ಅಹಮದ್ ರಾಥರ್, ಮುಜಮ್ಮಿಲ್ ಶಕೀಲ್ ಮತ್ತು ಉಮರ್ ಮೊಹಮ್ಮದ್ ಪ್ರಮುಖ ಆರೋಪಿಗಳೇ ಎಂಬ ಶಂಕೆ ಮೂಡಿದೆ.
ಜಮ್ಮು ಕಾಶ್ಮೀರ ಪೊಲೀಸರು ಮೊನ್ನೆಯಷ್ಟೇ ಶ್ರಿನಗರದ ಹಲವು ಪ್ರದೇಶಗಳಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಪರ ಪೋಸ್ಟರ್‌ಗಳನ್ನು ಅಂಟಿಸಿದ್ದ ಹಿನ್ನೆಲೆ ತನಿಖೆ ಪ್ರಾರಂಭಿಸಿ, ಉತ್ತರ ಪ್ರದೇಶ, ಹರ್ಯಾಣ ಹಾಗೂ ದಿಲ್ಲಿಯವರೆಗೆ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿದ್ದರು. ಈ ತನಿಖೆಯ ವೇಳೆ ‘ವೈಟ್ ಕಾಲರ್ ಟೆರರ್’ ಎಂಬ ಹೊಸ ಮಾದರಿಯ ಉಗ್ರ ಜಾಲ ಬಯಲಾಗಿದ್ದು, ಮೂವರು ವೈದ್ಯರು ಸೇರಿ 8 ಮಂದಿಯನ್ನು ಬಂಧಿಸಲಾಗಿತ್ತು. ಅಲ್ಲದೇ, ಡಾ. ಮುಜಮ್ಮಿಲ್ ಮನೆಯಿಂದ ಸುಮಾರು 2,900 ಕಿಲೋ ಬಾಂಬ್ ತಯಾರಿಕಾ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ.
ಸ್ಫೋಟದ ನಂತರ ಪೊಲೀಸರ ನೇತೃತ್ವದ ತನಿಖಾ ತಂಡವು ಸ್ಫೋಟಗೊಂಡ ಹುಂಡೈ ಐ20 ಕಾರಿನ ಮಾಲಿಕತ್ವದ ಜಾಡು ಹಿಡಿದು ಹೊರಟಾಗ, ಅದು ಮೊದಲು ಸಲ್ಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ನೋಂದಾಯಿಸಲ್ಪಟ್ಟಿದ್ದು ಪತ್ತೆಯಾಯಿತು. ನಂತರ ಅನೇಕರ ಕೈ ಬದಲಾಗಿ ಕೊನೆಯಲ್ಲಿ ವೈದ್ಯ ಉಮರ್ ಮೊಹಮ್ಮದ್‌ನ ಕೈಗೆ ಆ ಕಾರು ತಲುಪಿದೆ ಎನ್ನುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಸ್ಫೋಟಕ್ಕೂ ಮುನ್ನ ಕಾರಿನ ಚಾಲಕರಾಗಿ ಉಮರ್ ಕಾಣಿಸಿಕೊಂಡಂತಿದ್ದು, ಪೊಲೀಸರ ತಂಡವು ಡಿಎನ್‌ಎ ಪರೀಕ್ಷೆಯ ಮೂಲಕ ಗುರುತು ದೃಢಪಡಿಸಲು ಮುಂದಾಗಿದೆ.
ಮೂರೂ ವೈದ್ಯರು ಉಗ್ರ ಸಂಘಟನೆಗಳ ಪರ ಕಾರ್ಯನಿರ್ವಹಿಸುತ್ತಿದ್ದರು ಎಂಬ ಶಂಕೆಯ ಮೇರೆಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಉಮರ್ ತನ್ನ ಸಂಗಾತಿಗಳ ಬಂಧನ ಮತ್ತು ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆಯಿಂದ ಆತಂಕಗೊಂಡು ಆತ್ಮಾಹುತಿ ದಾಳಿಗೆ ಮುಂದಾಗಿದ್ದಾನೆಯೇ ಎಂಬ ಶಂಕೆ ಮೂಡಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಅದೀಲ್ ಮೊದಲು ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿದ್ದರೆ, ಮುಜಮ್ಮಿಲ್ ಫರೀದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ ಹಿರಿಯ ರೆಸಿಡೆಂಟ್ ವೈದ್ಯರಾಗಿ ಕೆಲಸ ಮಾಡುತ್ತಿದ್ದ. ಇವರ ಸಹೋದ್ಯೋಗಿ ಲಕ್ನೋ ಮೂಲದ ಡಾ. ಶಹೀನ್ ಶಾಹಿದ್ ಅವರ ಕಾರಿನಿಂದಲೂ ಶಸ್ತ್ರಾಸ್ತ್ರಗಳು ಪತ್ತೆಯಾದ ನಂತರ ಅವರನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ: ದೆಹಲಿ ಸ್ಪೋಟ : ರಾಜ್ಯದಲ್ಲಿ ಬಿಗಿ ಭದ್ರತೆಗೆ ಸಿಎಂ ಸಿದ್ದರಾಮಯ್ಯ ಸೂಚನೆ


















