ಬೆಂಗಳೂರು : ಕೆಎಸ್‍ಆರ್‌ಟಿಸಿ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ವೈದ್ಯೆಯು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದೆ. ಫಿರೋಜ್‍ಖಾನ್ (46) ಎಂಬುವವನು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೋಲಿಸರಿಗೆ ದೂರು ನೀಡಿದ್ದಾಳೆ. ಸಂಜಯನಗರ ಪೊಲೀಸರು ಆತನನ್ನು ಬಂಧಿಸಿ, ಹೇಳಿಕೆ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವೈದ್ಯೆಯು ಅ.2ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅದೇ ಬಸ್‍ಗೆ ಹತ್ತಿದ್ದ ಫೈರೋಜ್‍ಖಾನ್, ವೈದ್ಯೆಯ ಪಕ್ಕದ ಸೀಟಿನಲ್ಲೇ ಕುಳಿತಿದ್ದನು. ಬಸ್ ಹೆಬ್ಬಾಳದ ಎಸ್ಟೀಮ್ ಮಾಲ್‍ನ ಬಳಿ ಬಂದಾಗ ಆರೋಪಿ, ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಸಾರ್ವಜನಿಕವಾಗಿ ಅವರ ಮುಂಗೈ ಮತ್ತು ತೊಡೆಯ ಭಾಗವನ್ನು ಮುಟ್ಟಿ, ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.