ಸಿಲ್ಚಾರ್: ಅಸ್ಸಾಂನ ಸಿಲ್ಚಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಯಾಪ್ಸಿ ಹೆಸರಿನಲ್ಲಿ ರೋಗಿಯ ಅನುಮತಿಯಿಲ್ಲದೆ ಆತನ ಖಾಸಗಿ ಅಂಗವನ್ನೇ ಕತ್ತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರದ ರೋಗಿಯೊಬ್ಬರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯ ನಿವಾಸಿ ಅತೀಖುರ್ ರೆಹಮಾನ್, ತಮ್ಮ ಗುಪ್ತಾಂಗದಲ್ಲಿ ಸೋಂಕು ಉಂಟಾದ ಕಾರಣ ಚಿಕಿತ್ಸೆ ಪಡೆಯಲು ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಸಿನ್ಹಾ ಎಂಬ ವೈದ್ಯರು ತನ್ನನ್ನು ಚಿಕಿತ್ಸೆಗಾಗಿ ದಾಖಲಿಸಿಕೊಂಡು, ಹಲವಾರು ಪರೀಕ್ಷೆಗಳನ್ನು ನಡೆಸಲು ಸಲಹೆ ನೀಡಿದ್ದಾರೆ. ನಂತರ ಬಯಾಪ್ಸಿ ನಡೆಸಲು ಶಿಫಾರಸು ಮಾಡಿದ್ದಾರೆ ಎಂದು ರೆಹಮಾನ್ ತಿಳಿಸಿದ್ದಾರೆ.
ರೆಹಮಾನ್ ಅವರನ್ನು ಬಯಾಪ್ಸಿ ಪ್ರಕ್ರಿಯೆಗಾಗಿ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಆದರೆ, ಅವರ ಅನುಮತಿಯಿಲ್ಲದೆ, ಡಾ. ಸಿನ್ಹಾ ಶಸ್ತ್ರಚಿಕಿತ್ಸೆ ನಡೆಸಿ ಅವರ ಖಾಸಗಿ ಅಂಗವನ್ನೇ ತೆಗೆದುಹಾಕಿದ್ದಾರೆ ಎಂದು ರೆಹಮಾನ್ ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಡ್ರೆಸ್ಸಿಂಗ್ ತೆಗೆದ ಬಳಿಕವೇ ನನಗೆ ವಿಷಯ ಗೊತ್ತಾಗಿದ್ದು. ಇದನ್ನು ತಿಳಿದು ನನಗೆ ಆಘಾತವಾಯಿತು ಎಂದು ರೆಹಮಾನ್ ಹೇಳಿದ್ದಾರೆ.
“ಡಾ. ಸಿನ್ಹಾ ನನಗೆ ಬಯಾಪ್ಸಿಗಾಗಿ ಖಾಸಗಿ ಭಾಗದ ಸಣ್ಣ ಅಂಗಾಂಶದ ಮಾದರಿಯನ್ನು ಮಾತ್ರ ತೆಗೆದುಕೊಳ್ಳುವುದಾಗಿ ಹೇಳಿದರು, ಆದರೆ ನಾನು ಡ್ರೆಸ್ಸಿಂಗ್ ತೆಗೆದಾಗ, ನನ್ನ ಖಾಸಗಿ ಅಂಗವನ್ನೇ ಕತ್ತರಿಸಿರುವುದು ಕಂಡು ನಾನು ಆಘಾತಕ್ಕೊಳಗಾದೆ” ಎಂದು ಅವರು ಆರೋಪಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ದೂರು
ಈ ಘಟನೆಯ ನಂತರ, ರೆಹಮಾನ್ ಡಾ. ಸಿನ್ಹಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರಾದರೂ ಆಸ್ಪತ್ರೆ ಆಡಳಿತ ಮಂಡಳಿಯು ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ನಾನು ಪೊಲೀಸರನ್ನು ಸಂಪರ್ಕಿಸಿ ವೈದ್ಯರ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರೋಗಿಯ ಆರೋಪಗಳ ಸತ್ಯಾಸತ್ಯತೆ ಮತ್ತು ವೈದ್ಯರ ವಿರುದ್ಧ ಮುಂದಿನ ಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.