ದೃಷ್ಟಿ ಉತ್ತಮವಾಗಿರಬೇಕೆಂದರೆ ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಣ್ಣಿನ ಸುರಕ್ಷತೆಗೆ ಮಾಡಬೇಕಾದ ಕೆಲಸಗಳನ್ನು ತಪ್ಪಿಸದೇ ಮಾಡಬೇಕಿದೆ. ಉದಾಹರಣೆಗೆ ನಿರಂತರವಾಗಿ ಕಣ್ಣನ್ನು ಮುಚ್ಚದೆ ನೋಡುವುದನ್ನು ಬಿಟ್ಟು ಆಗಾಗ ಕಣ್ಣು ಮಿಟುಕಿಸುವುದು, ತಣ್ಣನೆಯ ನೀರಿನಿಂದ ತೊಳೆಯುವುದು, ಕಣ್ಣಿಗೆ ಉತ್ತಮವಾಗಿರುವ ಆಹಾರ ಸೇವನೆ ಮಾಡುವುದು ಇತ್ಯಾದಿ.
ಹಾಗಾದರೆ ಕಣ್ಣಿನ ಆರೋಗ್ಯಕ್ಕೆ ಯಾವೆಲ್ಲಾ ತರಕಾರಿಗಳು ಉತ್ತಮ ಎನ್ನುವುದು ಗೊತ್ತಿಲ್ವಾ? ಚಿಂತೆ ಬೇಡ, ಈ ಲೇಖನದಲ್ಲಿ ಕಣ್ಣಿನ ದೃಷ್ಟಿ ಚೆನ್ನಾಗಿರುವಂತೆ ಮಾಡಿಕೊಳ್ಳಲು ಯಾವೆಲ್ಲಾ ತರಕಾರಿಗಳು ಸಹಾಯ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.
ಬಾಲ್ಯದಿಂದಲೂ ನಮ್ಮ ದೃಷ್ಟಿ ಸುಧಾರಿಸಲು ಪ್ರತಿದಿನ ಕ್ಯಾರೆಟ್ ತಿನ್ನಲು ಹಿರಿಯರು ಸಲಹೆ ನೀಡುವುದನ್ನು ನಾವೆಲ್ಲರೂ ಕೇಳಿದ್ದೇವೆ. ಕ್ಯಾರೆಟ್ ಮಾತ್ರವಲ್ಲ, ಇತರ ಹಲವಾರು ತರಕಾರಿಗಳು ಸಹ ದೃಷ್ಟಿ ಸುಧಾರಿಸಲು ಕೊಡುಗೆ ನೀಡುತ್ತವೆ ಎಂದು ಹಲವು ಅಧ್ಯಯನಗಳು ತೋರಿಸಿ ಕೊಟ್ಟಿವೆ.
- ಕ್ಯಾರೆಟ್ : ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಗಜ್ಜರಿ ಅಥವಾ ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು. ಆದರೆ ಕ್ಯಾರೆಟ್ ಸೇವನೆಯಿಂದ ಕಣ್ಣು ಹೇಗೆ ಉತ್ತಮವಾಗಿರುತ್ತದೆ ಎನ್ನುವುದು ಗೊತ್ತಾ

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಇದೆ, ಇದು ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ, ಇದು ಕಣ್ಣಿನ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ವಿಟಮಿನ್ ಎ ಯ ತೀವ್ರ ಕೊರತೆಯು ಕುರುಡುತನಕ್ಕೆ ಕಾರಣವಾಗಬಹುದು.
- ಪಾಲಕ್: ಪಾಲಕ್ನಲ್ಲಿ ಲುಟೀನ್ ಹಾಗೂ ಜಿಯಾಕ್ಸಾಂಥಿನ್ ಎಂಬ ಎರಡು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳಲ್ಲಿ ಹಾನಿಕಾರಕ ನೇರಳಾತೀತ ಕಿರಣಗಳು ಮತ್ತು ನೀಲಿ ಬೆಳಕಿನಿಂದ ಉಂಟಾಗುವ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಪಾಲಕ್ ಮ್ಯಾಕ್ಯುಲರ್ ಡಿಜೆನರೇಶನ್ ಹಾಗೂ ಕಣ್ಣಿನ ಪೊರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

- ಗೆಣಸು: ಗೆಣಸು ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್‌ನ ಅತ್ಯುತ್ತಮ ಮೂಲವಾಗಿದೆ. ಕಾರ್ನಿಯಲ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರಾತ್ರಿ ದೃಷ್ಟಿಯನ್ನು ಸುಧಾರಿಸಲು ವಿಟಮಿನ್ ಎ ಮುಖ್ಯವಾಗಿದೆ. ಪ್ರತಿದಿನ ಆಹಾರದ ಜೊತೆ ಒಂದನ್ನು ಸೇವಿಸದರೆ ಉತ್ತಮ

- ಕ್ಯಾಪ್ಸಿಕಂ: ಕ್ಯಾಪ್ಸಿಕಂ ಅಥವಾ ದೊಣ್ಣೆ ಮೆಣಸಿನಕಾಯಿ ಹಲವು ಬಣ್ಣಗಳಲ್ಲಿ ಇರುತ್ತವೆ. ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಇದ್ದು, ಕಣ್ಣುಗಳಲ್ಲಿನ ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಕಣ್ಣಿನ ಪೊರೆಯ ಅಪಾಯ ಕಡಿಮೆ ಮಾಡುತ್ತದೆ.

- ಟೊಮೆಟೊ: ಟೊಮೆಟೊದಲ್ಲಿ ಲೈಕೋಪೀನ್ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದ್ದು, ರೆಟಿನಾವನ್ನು ರಕ್ಷಿಸುತ್ತದೆ ಹಾಗೂ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯ ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಹಾಗೂ ಎ ಸಹ ಹೊಂದಿದೆ. ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ರಾತ್ರಿ ಕುರುಡುತನವನ್ನು ತಡೆಗಟ್ಟಲು ಅಗತ್ಯವಾದ ವಿಟಮಿನ್ ಎ ಸೇರಿದಂತೆ ಹಲವಾರು ಪೋಷಕಾಂಶಗಳು ಉತ್ತಮ ದೃಷ್ಟಿಗೆ ಕೊಡುಗೆ ನೀಡುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳು ಒಣ ಕಣ್ಣಿನ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ರೆಟಿನಾದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ, ಆದರೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ ರಕ್ಷಿಸುತ್ತವೆ. ಸತುವು ಜೊತೆಗೆ ವಿಟಮಿನ್ ಸಿ ಮತ್ತು ಇ ಕೂಡ ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನೂ ಓದಿ : ಗುಜರಿ ಮಾರಾಟದಿಂದ ಒಂದೇ ತಿಂಗಳಲ್ಲಿ 800 ಕೋಟಿ ರೂ. ಗಳಿಸಿದ ಕೇಂದ್ರ ಸರ್ಕಾರ, ಚಂದ್ರಯಾನ-3 ವೆಚ್ಚವನ್ನೂ ಮೀರಿದ ಆದಾಯ!



















