ಬೆಂಗಳೂರು: ಕೋಟ್ಯಧೀಶರಾಗಬೇಕು ಎಂಬ ಆಸೆ ತುಂಬ ಜನರಿಗೆ ಇರುತ್ತದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಬರೀ ದುಡಿದೇ ಕೋಟಿ ರೂ. ಗಳಿಸುತ್ತೇನೆ ಎಂಬುದು ಕಷ್ಟಸಾಧ್ಯ. ಆದರೆ, ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಿದರೆ, ಸುದೀರ್ಘ ಅವಧಿಗೆ ಹೂಡಿಕೆ ಮಾಡಿದರೆ ಒಂದು ಕೋಟಿ ರೂಪಾಯಿಯನ್ನು ಗಳಿಸಬಹುದಾಗಿದೆ. ಹಾಗಾದರೆ, ಹೇಗೆ ಒಂದು ಕೋಟಿ ರೂ. ಗಳಿಕೆ ಮಾಡಬಹುದು ಅಂತೀರಾ? ಅದಕ್ಕೆ 15x15x15 ಸೂತ್ರ (15x15x15 SIP Strategy)ಪಾಲಿಸಬೇಕು. ಇದೇನು? ಹೂಡಿಕೆ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
15x15x15 ಸೂತ್ರ ಎಂದರೆ, 15 ವರ್ಷಗಳವರೆಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿಯನ್ನು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಬೇಕು. 15 ವರ್ಷಗಳ ನಂತರ ಶೇ.15ರಷ್ಟು ರಿಟರ್ನ್ಸ್ ದೊರೆತರೆ, ಸುಮಾರು 1 ಕೋಟಿ ರೂ. ಗಳಿಕೆ ಮಾಡಬಹುದಾಗಿದೆ. ಇದನ್ನೇ 15x15x15 ಸ್ಟ್ರ್ಯಾಟಜಿ ಎಂದು ಕರೆಯಲಾಗುತ್ತದೆ.
15x15x15 ಸೂತ್ರವನ್ನು ಅನ್ವಯಿಸಿದಾಗ, 15 ವರ್ಷಗಳಲ್ಲಿ ಒಟ್ಟು ಹೂಡಿಕೆಯು 27,00,000 ರೂಪಾಯಿ ಆಗುತ್ತದೆ. ಅಂದರೆ, ಪ್ರತಿ ತಿಂಗಳು 15,000 ರೂಪಾಯಿಗಳಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಒಟ್ಟು 27,00,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ. ಹೂಡಿಕೆ ಮೊತ್ತಕ್ಕೆ ಶೇ.15ರಷ್ಟು ರಿಟರ್ನ್ಸ್ ದೊರೆತರೆ ಸುಮಾರು 74,52,946 ರೂಪಾಯಿಗಳ ಬಂಡವಾಳ ಲಾಭವನ್ನು ನೀಡುತ್ತದೆ.
ಅಂದರೆ, ಹೂಡಿಕೆಯ ಮೌಲ್ಯವು 74,52,946 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಹೀಗಾಗಿ, 15 ವರ್ಷಗಳ ಕೊನೆಯಲ್ಲಿ, ಹೂಡಿಕೆದಾರರು ಒಟ್ಟು 1,01,52,946 ರೂಪಾಯಿಗಳನ್ನು ಪಡೆಯುತ್ತಾರೆ. ಅಂದರೆ, ಹೂಡಿಕೆದಾರರು 27,00,000 ರೂಪಾಯಿಗಳನ್ನು ಹೂಡಿಕೆ ಮಾಡಿ 1,01,52,946 ರೂಪಾಯಿ ಗಳಿಸುತ್ತಾರೆ. ಆದರೆ, ಶೇ.15ರಷ್ಟು ರಿಟರ್ನ್ಸ್ ದೊರೆಯಬಹುದು, ಅಥವಾ ಅದಕ್ಕಿಂತ ಹೆಚ್ಚು ಅಥವಾ ಅದಕ್ಕಿಂತ ಕಡಿಮೆಯೂ ದೊರೆಯಬಹುದು. ಇದು ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿರುತ್ತದೆ.
ಗಮನಿಸಿ
ನಾವು ನಿಮಗೆ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಬಗ್ಗೆ ಮಾಹಿತಿಯನ್ನಷ್ಟೇ ನೀಡಿದ್ದೇವೆ. ಇದು ನೀವು ಹೂಡಿಕೆ ಮಾಡುವ ಕುರಿತು ನಾವು ಮಾಡುತ್ತಿರುವ ಶಿಫಾರಸು ಅಲ್ಲ. ಮಾರುಕಟ್ಟೆ ಆಧರಿಸಿ ರಿಟರ್ನ್ಸ್ ದೊರೆಯುವುದರಿಂದ ರಿಸ್ಕ್ ಇದ್ದೇ ಇರುತ್ತದೆ. ಹಾಗಾಗಿ, ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯಿರಿ. ಮಾಹಿತಿ ದೃಷ್ಟಿಗಾಗಿ ಮಾತ್ರ ಲೇಖನ ಪ್ರಕಟಿಸಲಾಗಿದೆ ಅಷ್ಟೆ.