ಮಾಲ್ ಗಳಲ್ಲಿ ಮಕ್ಕಳಿಗೆ ಅಡ್ವೆಂಚರ್ ಗೇಮ್ ಆಡಿಸುವ ಪಾಲಕರು ಈ ಸ್ಟೋರಿ ಮಿಸ್ ಮಾಡದೆ ಓದಬೇಕು. ಏಕೆಂದರೆ, ನಿಮ್ಮ ಮಕ್ಕಳು ಈ ಆಟವಾಡುವ ವೇಳೆ ಎಷ್ಟು ಸೇಫ್!? ಎಂಬುವುದನ್ನು ನೀವು ಚಿಂತಸಿಲೇಬೇಕಿದೆ.
ಪ್ರತಿಷ್ಠಿತ ಮಾಲ್ ನಲ್ಲಿ ಆಡಲು ಹೋಗಿ ಬಾಲಕನೊಬ್ಬ ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ. ಮಾಲ್ ನಲ್ಲಿ ಆಡುವಾಗ ತೊಂದರೆಯಾದರೂ ಯಾವುದೇ ಸುರಕ್ಷತೆ ಕ್ರಮಗಳಿಲ್ಲ. ಆದರೂ ಅಡ್ವೆಂಚರ್ ಗೇಮ್ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ರಾಜಾಜಿನಗರದ ಒರಾಯನ್ ಮಾಲ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒರಾಯನ್ ಮಾಲ್ ನ ನಾಲ್ಕನೇ ಮಹಡಿಯಲ್ಲಿರುವ Bounce INC Trampoline Facility ನಲ್ಲಿ ಈ ದುರಂತ ನಡೆದಿದೆ. ಮಾರ್ಕ್ ನಿರಂಜನ (16) ಆಟವಾಡಲು ಹೋಗಿ ಕಾಲು ಮುರಿದುಕೊಂಡಿರುವ ಬಾಲಕ. ಅಲ್ಲಿನ ಸಿಬ್ಬಂದಿ, ಘಟನೆ ನಡೆದ 45 ನಿಮಿಷಗಳ ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಿಯಾಗಿ ಪ್ರಥಮ ಚಿಕಿತ್ಸೆಯನ್ನು ಕೂಡ ಮಾಡಿಲ್ಲ. ಮಾಲ್ ನಲ್ಲಿ ಆ್ಯಂಬುಲೆನ್ಸ್ ಸೌಲಭ್ಯ, ಮೆಡಿಕಲ್ ಸೌಲಭ್ಯ ಕೂಡ ಇಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಬಾಲಕನ ತಂದೆ ಪ್ಯಾಟ್ರಿಕ್ ಕುಮಾರ್ ದೂರು ನೀಡಿದ್ದಾರೆ. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.