ಬೆಂಗಳೂರು: ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ತುಂಬ ಜನರಿಗೆ ತಪ್ಪು ಕಲ್ಪನೆಗಳು ಇರುತ್ತವೆ. ಕ್ರೆಡಿಟ್ ಕಾರ್ಡ್ ಬಳಸಿದರೆ, ಖರ್ಚಿನ ಮೇಲೆ ಹೆಚ್ಚಿನ ಹಣ ಕೊಡಬೇಕು, ಇದರಲ್ಲಿ ಮೋಸವಾಗುತ್ತದೆ. ಸುಖಾಸುಮನ್ನೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಎಂಬ ತಪ್ಪು ಕಲ್ಪನೆಗಳು ಇರುತ್ತವೆ. ಹಾಗೆಯೇ, ಯಾವ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಪಡೆಯುತ್ತೇವೆಯೋ, ಅದೇ ಬ್ಯಾಂಕಿನಲ್ಲಿ ಸೇವಿಂಗ್ಸ್ ಅಕೌಂಟ್ ಇರಬೇಕು ಎಂಬ ನಿಯಮವಿದೆ ಎಂದು ಕೂಡ ಹೆಚ್ಚಿನ ಜನ ತಿಳಿದುಕೊಂಡಿರುತ್ತಾರೆ. ಆದರೆ, ಇದು ತಪ್ಪು ಮಾಹಿತಿ ಆಗಿದೆ.
ನಿಯಮಗಳ ಪ್ರಕಾರ, ಯಾವುದೇ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದರೆ, ಆ ಬ್ಯಾಂಕಿನ ಯಾವುದೇ ಬ್ರ್ಯಾಂಚ್ ಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಉಳಿತಾಯ ಖಾತೆಗಳ ಅಗತ್ಯವಿಲ್ಲದೆಯೇ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ನೀಡುತ್ತವೆ.
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಬ್ಯಾಂಕ್ ಗಳಷ್ಟೇ ಅಲ್ಲದೆ, ಹಲವಾರು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC), ಫಿನ್ ಟೆಕ್ ಕಂಪನಿಗಳು, ಮತ್ತು ಕೆಲವು ಕೋ-ಬ್ರಾಂಡೆಡ್ (co-branded) ಸಂಸ್ಥೆಗಳು ಯಾವುದೇ ಉಳಿತಾಯ ಖಾತೆಯ ಅಗತ್ಯವಿಲ್ಲದೆಯೂ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿವೆ. ಇವುಗಳು ಕೂಡ ಸಾಮಾನ್ಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಂತೆಯೇ ಕೆಲಸ ಮಾಡುತ್ತವೆ. ನೀವು ಶಾಪಿಂಗ್ ಮಾಡಬಹುದು, ಬಿಲ್ ಪಾವತಿಸಬಹುದು, ಮತ್ತು ಆನ್ ಲೈನ್ ನಲ್ಲಿ ಸುಲಭವಾಗಿ ವಹಿವಾಟು ನಡೆಸಬಹುದು.
ಒಳ್ಳೆಯ ಸಿಬಿಲ್ ಸ್ಕೋರ್ ನಿರ್ವಹಣೆ ಮಾಡಲು, ಸಾಲ ಪಡೆಯಲು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುತ್ತಾರೆ. ತುರ್ತು ಸಂದರ್ಭಗಳ ಖರ್ಚಿಗೂ ಇದು ನೆರವಾಗುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಬಳಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಬೇಕಾಬಿಟ್ಟಿ ಖರ್ಚು ಮಾಡುವುದು, ಬಿಲ್ ಬಾಕಿ ಉಳಿಸಿಕೊಳ್ಳುವುದು ಹೆಚ್ಚಿನ ಬಡ್ಡಿ, ಶುಲ್ಕಕ್ಕೆ, ಬಿಲ್ ಪಾವತಿಗೆ ಕಾರಣವಾಗುತ್ತದೆ ಎಂಬುದು ನೆನಪಿರಬೇಕು.



















